Kalaburagi | ಎಸ್‌ಐಆರ್; ವಿಚಾರಣೆಗೆ ಹಾಜರಾಗಲು 59 ಸಾವಿರ ಮತದಾರರಿಗೆ ನೋಟಿಸ್ ಜಾರಿ: ಡಿಸಿ ಇಕ್ರಮ್ ಶರೀಫ್
ಅ.12ರವರೆಗೆ ವಿಚಾರಣೆ, ಸೆ.19-20ರಂದು ವಿಶೇಷ ಮತದಾರರ ಸೇರ್ಪಡೆ ಅಭಿಯಾನ
ಕಲಬುರಗಿ: ವಿಶೇಷ ಸಂಕ್ಷಿಪ್ತ ಮತದಾರರ ಪರಿಷ್ಕರಣೆ–2026ರ ಅಂಗವಾಗಿ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ 2002ರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್) ಪಟ್ಟಿಯ ಮಾಹಿತಿ ನೀಡದ ಹಾಗೂ ಆ ಪಟ್ಟಿಯ ದಾಖಲೆಗಳಿಗೆ ತಾಳೆಯಾಗದ ಒಟ್ಟು 1,05,493 ಮತದಾರರಿಗೆ ಮತದಾರರ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿ ಸಮಕ್ಷಮ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಈಗಾಗಲೇ 59,389 ಮತದಾರರಿಗೆ ನೋಟಿಸ್ ತಲುಪಿಸಲಾಗಿದ್ದು, ಉಳಿದ 46,111 ಮತದಾರರಿಗೆ ನೋಟಿಸ್ ವಿತರಿಸುವ ಪ್ರಕ್ರಿಯೆ ಮುಂದುವರಿದಿದೆ ಎಂದರು.
18.49 ಲಕ್ಷ ಮತದಾರರ ಕರಡು ಪಟ್ಟಿ ಪ್ರಕಟ :
ಕಳೆದ ಆಗಸ್ಟ್ 24ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ 18,49,585 ಮತದಾರರು ದಾಖಲಾಗಿದ್ದಾರೆ. ಈ ಪೈಕಿ 53,788 ಮತದಾರರು 2002ರ ಎಸ್‌ಐಆರ್ ಪಟ್ಟಿಯ ಮಾಹಿತಿ ನೀಡದ ಕಾರಣ ‘ನೋ ಮ್ಯಾಪಿಂಗ್’ ವಿಭಾಗಕ್ಕೆ ಸೇರಿದ್ದಾರೆ. ಮತ್ತೊಂದು 51,705 ಮತದಾರರ ದಾಖಲೆಗಳು 2002ರ ಎಸ್‌ಐಆರ್ ಪಟ್ಟಿಯೊಂದಿಗೆ ಹೊಂದಿಕೆಯಾಗದ ಕಾರಣ ‘ಅನೋಮಲೀಸ್’ ವಿಭಾಗದಲ್ಲಿ ಪರಿಗಣಿಸಲಾಗಿದೆ.
ಇಂತಹ ಮತದಾರರ ವಿಚಾರಣೆ ಪ್ರಕ್ರಿಯೆ ಸೆಪ್ಟೆಂಬರ್ 5ರಿಂದ ಆರಂಭವಾಗಿದ್ದು, ಅಕ್ಟೋಬರ್ 12 ವಿಚಾರಣೆಯ ಕೊನೆಯ ದಿನವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ನೋಟಿಸ್ ವಿತರಣೆ :
ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ನೋಟಿಸ್ ನೀಡಿರುವ ಮತದಾರರ ಸಂಖ್ಯೆ ಹೀಗಿದೆ: ಅಫಜಲಪುರ – 6,179, ಜೇವರ್ಗಿ – 5,005, ಚಿತ್ತಾಪುರ – 1,887, ಸೇಡಂ – 3,516, ಚಿಂಚೋಳಿ – 3,625, ಗುಲಬರ್ಗಾ ಗ್ರಾಮೀಣ – 6,400, ಗುಲಬರ್ಗಾ ದಕ್ಷಿಣ – 13,816, ಗುಲಬರ್ಗಾ ಉತ್ತರ – 14,070 ಹಾಗೂ ಆಳಂದ – 4,891.
ವಿಚಾರಣೆ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಈಗಿರುವ 9 ಸಹಾಯಕ ಮತದಾರರ ನೋಂದಣಾಧಿಕಾರಿಗಳ (ಎಇಆರ್‌ಒ) ಜೊತೆಗೆ ಹೆಚ್ಚುವರಿಯಾಗಿ 67 ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
61 ಹೊಸ ಮತಗಟ್ಟೆಗಳ ರಚನೆ :
ಎಸ್‌ಐಆರ್ ಪ್ರಕ್ರಿಯೆಯಡಿ ಮತಗಟ್ಟೆಗಳ ತರ್ಕಬದ್ಧೀಕರಣದ ನಂತರ ಜಿಲ್ಲೆಯಲ್ಲಿ 61 ಹೊಸ ಮತಗಟ್ಟೆಗಳನ್ನು ರಚಿಸಲಾಗಿದ್ದು, ಅವುಗಳಿಗೆ 61 ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ನೇಮಕ ಮಾಡಲಾಗಿದೆ.
ಇದರ ಜೊತೆಗೆ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಬಯಸುವವರಿಗಾಗಿ ಸೆಪ್ಟೆಂಬರ್ 19 ಮತ್ತು 20ರಂದು ಜಿಲ್ಲೆಯಾದ್ಯಂತ ವಿಶೇಷ ಮತದಾರರ ಸೇರ್ಪಡೆ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ನಮೂನೆ–6 ಮೂಲಕ ಹೆಸರು ಸೇರ್ಪಡೆಗೆ ಅವಕಾಶ :
ಕರಡು ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ಮತದಾರರ ಹೆಸರು ಹೊರಗುಳಿದಿದ್ದರೆ ನಮೂನೆ–6 ಭರ್ತಿ ಮಾಡಿ ಅಥವಾ ಆನ್‌ಲೈನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಹೊಸದಾಗಿ ಮತದಾರರ ಪಟ್ಟಿಗೆ ಸೇರಲು ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮತದಾರರ ಸೇರ್ಪಡೆ ಪ್ರಕ್ರಿಯೆ ನಿರಂತರವಾಗಿ ನಡೆಯಲಿದ್ದು, ಸೆಪ್ಟೆಂಬರ್ 23ರೊಳಗೆ ಅರ್ಜಿ ಸಲ್ಲಿಸಿದವರ ಹೆಸರು ಅಕ್ಟೋಬರ್ 27ರಂದು ಪ್ರಕಟವಾಗುವ ಅಂತಿಮ ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ ಎಂದು ಇಕ್ರಮ್ ಶರೀಫ್ ಸ್ಪಷ್ಟಪಡಿಸಿದ್ದಾರೆ.