×
Ad

Kalaburagi | ಮಾಸಾಂತ್ಯಕ್ಕೆ ಕವಿ ಸಮ್ಮೇಳನ: ಹಿರಿಯ ಸಾಹಿತಿ ನರಸಿಂಗರಾವ ಹೇಮನೂರ ಸಾರಥ್ಯ

ಜಿಲ್ಲಾ ಪ್ರಥಮ ಕವಿ ಸಮ್ಮೇಳನದ ಸ್ವಾಗತ ಸಮಿತಿಯ ಪದಾಧಿಕಾರಿಗಳಿಗೆ ಸತ್ಕಾರ

Update: 2026-05-21 17:07 IST

ಕಲಬುರಗಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಜಂಟಿ ಆಶ್ರಯದಲ್ಲಿ ಮಾಸಾಂತ್ಯಕ್ಕೆ ನಡೆಯಲಿರುವ ಜಿಲ್ಲಾ ಪ್ರಥಮ ಕವಿ ಸಮ್ಮೇಳನದ ಸ್ವಾಗತ ಸಮಿತಿಗೆ ನೇಮಕಗೊಂಡ ಅಧ್ಯಕ್ಷ, ಗೌರವಾಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರನ್ನು ಕನ್ನಡ ಭವನದಲ್ಲಿ ಸತ್ಕರಿಸಿ ಜವಾಬ್ದಾರಿ ವಹಿಸಲಾಯಿತು.

ಹಿರಿಯ ಸಾಹಿತಿ ನರಸಿಂಗರಾವ ಹೇಮನೂರ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ನ್ಯಾಯವಾದಿ ಸುರೇಶ ಪಾಟೀಲ ಜೋಗೂರ, ಶಿವಾನಂದ ಹೊನಗುಂಟಿ ಹಾಗೂ ರಾಜೇಶ್ವರಿ ಸಾಹು ಅವರನ್ನು ಕ್ರಮವಾಗಿ ಸ್ವಾಗತ ಸಮಿತಿಯ ಅಧ್ಯಕ್ಷ, ಗೌರವಾಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಹೊಸ ಪೀಳಿಗೆಯಲ್ಲಿ ಸಾಹಿತ್ಯಾಸಕ್ತಿ ಹೆಚ್ಚಿಸಲು ಹಾಗೂ ಕನ್ನಡ ಸಾಹಿತ್ಯ ಪರಂಪರೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಇಂತಹ ಕವಿ ಸಮ್ಮೇಳನಗಳು ಪೂರಕವಾಗುತ್ತವೆ ಎಂದು ಹೇಳಿದರು.

ಸಮಾಜದಲ್ಲಿನ ಪ್ರಚಲಿತ ಘಟನೆಗಳನ್ನು ಕಾವ್ಯದ ಮೂಲಕ ಪ್ರತಿಬಿಂಬಿಸುವ ಮೂಲಕ ಸಮಾಜವನ್ನು ಸಜ್ಜನಿಕೆಯಿಂದ ಕಾಪಾಡುವಲ್ಲಿ ಬರಹಗಾರರ ಪಾತ್ರ ಮಹತ್ವದ್ದಾಗಿದೆ. ಈ ಕವಿ ಸಮ್ಮೇಳನವು ಉದಯೋನ್ಮುಖ ಕವಿಗಳಿಗೆ ಹೊಸ ಪ್ರೇರಣೆ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸತ್ಕಾರ ಸ್ವೀಕರಿಸಿ ಮಾತನಾಡಿದ ಸುರೇಶ ಪಾಟೀಲ ಜೋಗೂರ, ಶಿವಾನಂದ ಹೊನಗುಂಟಿ ಹಾಗೂ ರಾಜೇಶ್ವರಿ ಸಾಹು ಅವರು, ಕಲಬುರಗಿ ನೆಲ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದು, ಕನ್ನಡ ಭಾಷೆಗೆ ವಚನ ಸಾಹಿತ್ಯ ಪುನರ್ಜನ್ಮ ನೀಡಿದೆ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಶರಣರಾಜ ಛಪಬಂದಿ, ಸಿದ್ಧಲಿಂಗ ಬಾಳಿ, ಪ್ರಭುಲಿಂಗ ಮೂಲಗೆ, ಸೋಮಶೇಖರಯ್ಯಾ ಹೊಸಮಠ, ದಿನೇಶ ಮದಕರಿ, ರಾಜೇಂದ್ರ ಮಾಡಬೂಳ, ಬಸಯ್ಯಾ ಸ್ವಾಮಿ, ಶ್ವೇತಾ ಪಾಟೀಲ ಚಿತ್ತಾಪೂರ, ಧರ್ಮರಾಜ ಜವಳಿ, ಪರಮಾನಂದ ಸರಸಂಬಿ, ಗಣೇಶ ಚಿನ್ನಾಕಾರ, ನವಾಬ ಖಾನ್, ಬಾಬುರಾವ ಪಾಟೀಲ, ಚಂದ್ರಕಲಾ ಪಾಟೀಲ, ಗೌಡೇಶ ಬಿರಾದಾರ, ಅಂಬರೀಶ ನೂಲಾ, ಗುರುರಾಜ ಕೋರವಾರ, ರಾಜಕುಮಾರ, ರೇವಣಸಿದ್ಧ ಹೊಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News