Kalaburagi | ಸಿದ್ದರಾಮಯ್ಯರ ಪ್ರತಿಮೆ ತೆರವು: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ಕಲಬುರಗಿ : ನಗರದ ಹೈಕೋರ್ಟ್ ವೃತ್ತದಲ್ಲಿ ಸ್ಥಾಪಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ಗುರುತಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಗೊಂಡ ಸಂಘರ್ಷ ಸಮಿತಿ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿರುವ ಸಮಿತಿಯ ಮುಖಂಡ ಸಂತೋಷಕುಮಾರ ಎಸ್.ಪಿ., ಸಿದ್ದರಾಮಯ್ಯ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿದ್ದು, ಸಾಮಾಜಿಕ ನ್ಯಾಯ ಹಾಗೂ ಹಿಂದುಳಿದ ವರ್ಗಗಳ ಪರವಾಗಿ ಕೆಲಸ ಮಾಡಿದ ನಾಯಕರಾಗಿದ್ದಾರೆ. ಅವರ ಪ್ರತಿಮೆ ತೆರವುಗೊಳಿಸಿರುವುದರಿಂದ ಅಹಿಂದ ವರ್ಗದ ಜನರಲ್ಲಿ ಅಸಮಾಧಾನ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಹೈಕೋರ್ಟ್ ವೃತ್ತದಲ್ಲಿ ಪ್ರತಿಮೆಯನ್ನು ಅನುಮತಿಯಿಲ್ಲದೆ ಸ್ಥಾಪಿಸಲಾಗಿತ್ತು ಎಂಬ ಕಾರಣಕ್ಕೆ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನಲ್ಲಿ ಅದನ್ನು ತೆರವುಗೊಳಿಸಿದ್ದರು. ಪ್ರತಿಮೆ ಸ್ಥಾಪನೆಗೆ ಅಧಿಕೃತ ಅನುಮತಿ ಪಡೆಯಲಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರತಿಮೆ ತೆರವುಗೊಳಿಸಿದ ಪ್ರಕರಣದಲ್ಲಿ ಕಾನೂನು ಉಲ್ಲಂಘನೆಯಾಗಿದ್ದರೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ, ಇದರ ಹಿಂದೆ ಯಾವುದೇ ಸಂಘಟಿತ ಅಥವಾ ರಾಜಕೀಯ ಉದ್ದೇಶವಿದೆಯೇ ಎಂಬುದನ್ನು ಪರಿಶೀಲಿಸಿ ವಾಸ್ತವಾಂಶವನ್ನು ಬಹಿರಂಗಪಡಿಸಬೇಕು ಎಂದು ಸಮಿತಿ ಆಗ್ರಹಿಸಿದೆ.
ಕಾನೂನುಬದ್ಧ ಪ್ರಕ್ರಿಯೆ ಅನುಸರಿಸಿ ತೆರವುಗೊಳಿಸಲಾದ ಪ್ರತಿಮೆಯನ್ನು ಮರುಸ್ಥಾಪಿಸುವ ಕುರಿತು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಪ್ರತಿಮೆ ಮರುಸ್ಥಾಪನೆಯಾದಲ್ಲಿ ಅಗತ್ಯ ಭದ್ರತೆ ಒದಗಿಸಬೇಕು ಎಂದು ಗೊಂಡ ಸಂಘರ್ಷ ಸಮಿತಿ ಮನವಿ ಮಾಡಿದೆ.