ಕಲಬುರಗಿ : ಕಲ್ಯಾಣ ಕರ್ನಾಟಕ ಪಬ್ಲಿಕೇಷನ್ಸ್ ವತಿಯಿಂದ ದೇವು ಪತ್ತಾರ ಹಾಗೂ ವಿಜಯಕುಮಾರ ಪತ್ತಾರ ರೂಪಿಸಿರುವ ‘ಹೈದರಾಬಾದ್ ವಿಮೋಚನೆಯ ಸುತ್ತಮುತ್ತ’ ವಿಶೇಷ ಕೈಪಿಡಿಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಲಬುರಗಿಯಲ್ಲಿ ಬಿಡುಗಡೆ ಮಾಡಿದರು.

1948ರ ಸೆಪ್ಟೆಂಬರ್ 17ರಂದು ಹೈದರಾಬಾದ್ ನಿಜಾಮರ ಆಡಳಿತದಿಂದ ಕಲ್ಯಾಣ ಕರ್ನಾಟಕ ಪ್ರದೇಶ ವಿಮೋಚನೆಗೊಂಡು ಭಾರತ ಒಕ್ಕೂಟದಲ್ಲಿ ವಿಲೀನಗೊಂಡ ಐತಿಹಾಸಿಕ ಘಟನೆಯ ಕುರಿತು ಮುಂದಿನ ಪೀಳಿಗೆಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಕೈಪಿಡಿಯನ್ನು ಪ್ರಕಟಿಸಲಾಗಿದೆ.

ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದ ಹೋರಾಟಗಾರರ ತ್ಯಾಗ ಮತ್ತು ಕೊಡುಗೆಯನ್ನು ಸ್ಮರಿಸುವ ಜತೆಗೆ, ಅಂದಿನ ಪ್ರಮುಖ ಘಟನೆಗಳು ಹಾಗೂ ಐತಿಹಾಸಿಕ ಬೆಳವಣಿಗೆಗಳನ್ನು ಕೈಪಿಡಿಯಲ್ಲಿ ದಾಖಲಿಸಲಾಗಿದೆ. ಹೈದರಾಬಾದ್ ವಿಮೋಚನಾ ಹೋರಾಟದ ಹಿನ್ನೆಲೆ, ಸಂವಿಧಾನದ 371ನೇ ವಿಧಿಯ ತಿದ್ದುಪಡಿ ಹಾಗೂ ಅದರ ಮಹತ್ವದ ಕುರಿತ ಮಾಹಿತಿಯನ್ನೂ ಒಳಗೊಂಡಿದೆ.

ಕಲ್ಯಾಣ ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗುವಂತೆ ಈ ಭಾಗದ ಪ್ರಮುಖ ಪ್ರವಾಸಿ ತಾಣಗಳ ಕುರಿತು ವಿಶೇಷ ಲೇಖನಗಳನ್ನೂ ಕೈಪಿಡಿಯಲ್ಲಿ ಪ್ರಕಟಿಸಲಾಗಿದೆ.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿಯೂ ಕೈಪಿಡಿಯನ್ನು ಏಕಕಾಲದಲ್ಲಿ ಬಿಡುಗಡೆ ಮಾಡುವ ಮೂಲಕ ಐತಿಹಾಸಿಕ ವಿಚಾರಗಳನ್ನು ಯುವಜನತೆ ಹಾಗೂ ವಿದ್ಯಾರ್ಥಿಗಳಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದು ಪ್ರಕಾಶಕರು ತಿಳಿಸಿದ್ದಾರೆ.

ಬಹುವರ್ಣದಲ್ಲಿ ಪ್ರಕಟವಾಗಿರುವ ಈ ವಿಶೇಷ ಕೈಪಿಡಿಯನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಗುವುದು. ಐತಿಹಾಸಿಕ ಹೋರಾಟ, ಕಲ್ಯಾಣ ಕರ್ನಾಟಕದ ವೈಶಿಷ್ಟ್ಯ ಹಾಗೂ ಈ ಭಾಗದ ಅಭಿವೃದ್ಧಿಗೆ ಸಂಬಂಧಿಸಿದ ಅರಿವು ಮೂಡಿಸುವ ಜತೆಗೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ ಎಂದು ತಿಳಿಸಲಾಗಿದೆ.

ಕೈಪಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಕಲಬುರಗಿ ಸಂಸದ ರಾಧಾಕೃಷ್ಣ, ಶಾಸಕರಾದ ಎಂ.ವೈ. ಪಾಟೀಲ, ಅಲ್ಲಮಪ್ರಭು ಪಾಟೀಲ ಹಾಗೂ ಜಗದೇವ ಗುತ್ತೇದಾರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor