Kalaburagi | ಶಿಕ್ಷಕರ ಸೇವಾ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಲು ಶಶೀಲ್ ನಮೋಶಿ ಮನವಿ
ಕಲಬುರಗಿ: ಪ್ರೌಢಶಾಲಾ ಶಿಕ್ಷಕರ ಬಹುದಿನಗಳ ಬೇಡಿಕೆಗಳು ಹಾಗೂ ಸೇವಾ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ನೂತನ ಅಪರ ಆಯುಕ್ತ ಅವಿನಾಶ ಶಿಂಧೆ ಅವರಿಗೆ ಮನವಿ ಮಾಡಿದರು.
ಶನಿವಾರ ಅಪರ ಆಯುಕ್ತರ ಕಚೇರಿಯಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಭೇಟಿ ನಡೆಸಿದ ಅವರು, ಶಿಕ್ಷಕರ ಮುಂಬಡ್ತಿ, ಕೌನ್ಸೆಲಿಂಗ್, ಪಿಂಚಣಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿದರು.
ಪ್ರೌಢಶಾಲಾ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಮುಂಬಡ್ತಿ ನೀಡುವ ಕೌನ್ಸೆಲಿಂಗ್ ಅನ್ನು ಗುರುವಾರ ಅಥವಾ ಶುಕ್ರವಾರ ನಡೆಸುವುದಾಗಿ ಅಪರ ಆಯುಕ್ತರು ಭರವಸೆ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕರಿಗೆ ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳ ಹುದ್ದೆಗೆ ಮುಂಬಡ್ತಿ ನೀಡುವ ಸಂಬಂಧ ಬಾಕಿ ಇರುವ ಪ್ರಸ್ತಾವನೆಗಳನ್ನು ತಕ್ಷಣ ಸಲ್ಲಿಸುವಂತೆ ವಿಜಯನಗರ ಜಿಲ್ಲೆಯ ಉಪನಿರ್ದೇಶಕರಿಗೆ ಸೂಚಿಸಿದರು. ಜೇಷ್ಠತಾ ಪಟ್ಟಿಯನ್ನು ಶೀಘ್ರ ಪ್ರಕಟಿಸುವಂತೆಯೂ ನಿರ್ದೇಶನ ನೀಡಿದರು.
ಹೊಸ ಪಿಂಚಣಿ ವ್ಯವಸ್ಥೆಯಿಂದ ಹಳೆಯ ಪಿಂಚಣಿ ವ್ಯವಸ್ಥೆಗೆ ವರ್ಗಾಯಿಸಬೇಕಾದ 70 ಶಿಕ್ಷಕರ ಕಡತಗಳು ತಮ್ಮ ಲಾಗಿನ್ನಲ್ಲಿದ್ದು, ಅವುಗಳಿಗೆ ಅದೇ ದಿನ ಸಹಿ ಮಾಡುವುದಾಗಿ ತಿಳಿಸಿದರು. ಸಂಗೀತ ಮತ್ತು ನೃತ್ಯ ಶಿಕ್ಷಕರ ಮುಂಬಡ್ತಿ ಕೌನ್ಸೆಲಿಂಗ್ ದಿನಾಂಕವನ್ನೂ ಶೀಘ್ರ ನಿಗದಿಪಡಿಸುವುದಾಗಿ ಭರವಸೆ ನೀಡಿದರು.
ಇದಲ್ಲದೆ, ಕಲಬುರಗಿ ವಿಭಾಗದ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ವಿಭಾಗ ಮಟ್ಟದಲ್ಲಿ ಏಕರೂಪದ ಕಾರ್ಯಯೋಜನೆ ರೂಪಿಸಲಾಗುವುದು. ಈ ಕುರಿತು ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆ ನಡೆಸುವುದಾಗಿಯೂ ಅಪರ ಆಯುಕ್ತರು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.