ಕಲಬುರಗಿ: ನಗರದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯದ ನಾಲ್ಕನೇ ಮಹಡಿಯಿಂದ ಬಿದ್ದು ಬಿ.ಎಸ್ಸಿ. ನರ್ಸಿಂಗ್ ವಿದ್ಯಾರ್ಥಿ ಮೃತಪಟ್ಟ ಪ್ರಕರಣಕ್ಕೆ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ದಲಿತ ಸಂಘರ್ಷ ಸಮಿತಿ ಭೀಮಮಾರ್ಗ (ರಿ.) ಆರೋಪಿಸಿದೆ.

ವಸತಿ ನಿಲಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ಮರುಕಳಿಸುತ್ತಿದ್ದರೂ ಅಧಿಕಾರಿಗಳು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಹಾಸ್ಟೆಲ್‌ಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕಾದ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಸಮಿತಿ ದೂರಿದೆ.

ಮಧ್ಯರಾತ್ರಿ ಸುಮಾರು 2 ಗಂಟೆಗೆ ನಾಲ್ಕನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಮೃತಪಟ್ಟಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಕರ್ತವ್ಯ ನಿರ್ಲಕ್ಷ್ಯ ತೋರಿದ ಹಾಸ್ಟೆಲ್ ವಾರ್ಡನ್, ಜಂಟಿ ನಿರ್ದೇಶಕ ಹಾಗೂ ಸಹಾಯಕ ನಿರ್ದೇಶಕರನ್ನು ತಕ್ಷಣ ಅಮಾನತುಗೊಳಿಸಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಮಿತಿ ಒತ್ತಾಯಿಸಿದೆ.

ಮೃತ ವಿದ್ಯಾರ್ಥಿಯ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ, ಒಂದು ಎಕರೆ ಜಮೀನು ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಗಿದೆ.

ಸಮಿತಿಯ ಜಿಲ್ಲಾ ಸಂಚಾಲಕ ಕೈಲಾಸ ದೊಡ್ಡಮನಿ, ಮಲ್ಲಿಕಾರ್ಜುನ ಬನಸೋಡೆ, ಶಿವಕುಮಾರ ಬಂದಗೆ, ವಿಜಯಕುಮಾರ ಕೌಲಗಿ, ಮಹಾಂತೇಶ ಮಹಾಂತನೂರ, ಡಾ. ಕಾಶೀನಾಥ ಊಡಗಿ, ಸುನೀತಾ ನಂದೂರಕರ್, ಮಾರುತಿ ತೇಗಲತಿಪ್ಪಿ, ರಾಹುಲ್ ಹಾಗರಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor