Kalaburagi | ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಮಹತ್ವದ್ದು: ಡಾ.ಸದಾನಂದ ಪೆರ್ಲ
ಕಲಬುರಗಿ: ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸದೃಢ ರಾಷ್ಟ್ರ ನಿರ್ಮಾಣಕ್ಕೆ ಯುವಕರು ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ.ಸದಾನಂದ ಪೆರ್ಲ ಹೇಳಿದರು.
ನಗರದ ಅಳಂದ ರಸ್ತೆಯ ಶೆಟ್ಟಿ ಕಾಂಪ್ಲೆಕ್ಸ್ ಎದುರಿನ ಶಾರದಾ ವಿವೇಕ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಆಯೋಜಿಸಿದ್ದ ಡಾ. ಮಹಾಂತ ಶಿವಯೋಗಿಗಳವರ ಜಯಂತಿ ಹಾಗೂ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಪೂಜ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಠಾಧೀಶರು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತರಾಗದೆ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿ ಕ್ರಾಂತಿಕಾರಿ ಬದಲಾವಣೆ ತರಲು ಸಾಧ್ಯ ಎಂಬುದನ್ನು ಡಾ. ಮಹಾಂತ ಶಿವಯೋಗಿಗಳು ತಮ್ಮ ಕಾರ್ಯದ ಮೂಲಕ ತೋರಿಸಿಕೊಟ್ಟಿದ್ದಾರೆ. ‘ಮಹಾಂತ ಜೋಳಿಗೆ’ ಮೂಲಕ ಅವರು ಸಾರಿದ ಸಾಮಾಜಿಕ ಪರಿವರ್ತನೆಯ ಸಂದೇಶವನ್ನು ಗ್ರಾಮೀಣ ಪ್ರದೇಶಗಳಿಗೂ ತಲುಪಿಸಲು ಯುವಕರು ಮತ್ತು ವಿದ್ಯಾರ್ಥಿಗಳು ರಾಯಭಾರಿಗಳಾಗಬೇಕು ಎಂದು ಕರೆ ನೀಡಿದರು.
ದೇಶದಲ್ಲಿ 15 ರಿಂದ 29 ವರ್ಷದೊಳಗಿನ 37 ಕೋಟಿಗೂ ಅಧಿಕ ಯುವಜನತೆ ಇದ್ದು, ಭಾರತ ಸಮಗ್ರ ಅಭಿವೃದ್ಧಿ ಹೊಂದಬೇಕಾದರೆ ಯುವಕರು ದುಶ್ಚಟಗಳಿಂದ ದೂರವಿರಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ‘ಫಿಟ್ನೆಸ್ ಇಂಡಿಯಾ’ ಪರಿಕಲ್ಪನೆಯನ್ನು ಯುವಕರು ಅಳವಡಿಸಿಕೊಂಡರೆ ಆರೋಗ್ಯವಂತ ಹಾಗೂ ಅಭಿವೃದ್ಧಿಪರ ರಾಷ್ಟ್ರ ನಿರ್ಮಾಣ ಸಾಧ್ಯವಾಗಲಿದೆ ಎಂದು ಹೇಳಿದರು.
ಬಸವೇಶ್ವರ ಸಮಾಜ ಸೇವಾ ಬಳಗದ ಸೇವಾ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ. ಪಾಟೀಲ್ ಮಾತನಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಡಾ. ಮಹಾಂತ ಶಿವಯೋಗಿಗಳ ಆದರ್ಶ ಮತ್ತು ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾರದಾ ವಿವೇಕ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಹಣಮಂತ ರಾವ್ ಗುಡ್ಡೇವಾಡ ವಹಿಸಿದ್ದರು. ಶಿವಯೋಗೆಪ್ಪ ಎಸ್. ಬಿರಾದಾರ, ಉಪನ್ಯಾಸಕರಾದ ಸತೀಶ್ ತುಮಕೂರು, ವನಜಾಕ್ಷಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕವಿತಾ ಪ್ರಾರ್ಥನಾ ಗೀತೆ ಹಾಡಿದರು. ಉಪನ್ಯಾಸಕ ಮಹಾದೇವಪ್ಪ ಕುಂಬಾರ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ತ್ರಿವೇಣಿ ಕಲಶೆಟ್ಟಿ ವಂದಿಸಿದರು.