Kalaburagi | ಎ.ಎಸ್.ಡಿ.ಡಿ. ಪಟ್ಟಿಯ ನೈಜತೆ ಪರಿಶೀಲನೆಗೆ ವಾರ್ಡ್‌ವಾರು ಸಭೆ : ಸಾಹಿತ್ಯ ಆಲದಕಟ್ಟಿ

Update: 2026-08-01 22:23 IST

ಕಲಬುರಗಿ: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯದ ಅಂಗವಾಗಿ ಎ.ಎಸ್.ಡಿ.ಡಿ. (ಗೈರು, ಸ್ಥಳಾಂತರ, ನಿಧನ ಹಾಗೂ ಡುಪ್ಲಿಕೇಟ್) ಪಟ್ಟಿಯ ನೈಜತೆ ಮತ್ತು ನಿಖರತೆ ಪರಿಶೀಲನೆಗಾಗಿ ಆಗಸ್ಟ್‌ 3 ಮತ್ತು 4ರಂದು ಶಹಾಬಾದ ಹೋಬಳಿಯ 50 ಮತಗಟ್ಟೆಗಳಲ್ಲಿ ವಾರ್ಡ್‌ವಾರು ಹಾಗೂ ಗ್ರಾಮಸಭೆಗಳನ್ನು ನಡೆಸಲಾಗುವುದು ಎಂದು ಮತದಾರರ ನೋಂದಣಾಧಿಕಾರಿ ಹಾಗೂ ಕಲಬುರಗಿ ಉಪ ವಿಭಾಗದ ಹಿರಿಯ ಸಹಾಯಕ ಆಯುಕ್ತ ಸಾಹಿತ್ಯ ಆಲದಕಟ್ಟಿ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಒಟ್ಟು 23,71,542 ಮತದಾರರಲ್ಲಿ 51,187 ಮಂದಿಯನ್ನು (ಶೇ.18.62) ಎ.ಎಸ್.ಡಿ.ಡಿ. ಪಟ್ಟಿಯಲ್ಲಿ ಗುರುತಿಸಲಾಗಿದ್ದು, ಇದುವರೆಗೆ 2,18,741 ಗಣತಿ ನಮೂನೆಗಳನ್ನು (ಶೇ.79.58) ಮೊಬೈಲ್ ತಂತ್ರಾಂಶದ ಮೂಲಕ ಡಿಜಿಟೈಸ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಎ.ಎಸ್.ಡಿ.ಡಿ. ಪಟ್ಟಿಯಲ್ಲಿರುವವರ ಪೈಕಿ 7,176 ಮಂದಿ ನಿಧನ ಹೊಂದಿರುವವರು, 37,068 ಮಂದಿ ಸ್ಥಳಾಂತರಗೊಂಡವರು, 2,968 ಮಂದಿ ಬೇರೆ ಕ್ಷೇತ್ರಗಳಲ್ಲಿ ಈಗಾಗಲೇ ನೋಂದಾಯಿಸಿಕೊಂಡವರು ಹಾಗೂ 355 ಮಂದಿ ಇತರೆ ಕಾರಣಗಳಿಂದ ಪಟ್ಟಿಯಲ್ಲಿ ಸೇರಿದ್ದಾರೆ ಎಂದು ವಿವರಿಸಿದರು.

ಹೋಬಳಿವಾರು ಎ.ಎಸ್.ಡಿ.ಡಿ. ಪಟ್ಟಿಯಲ್ಲಿರುವ ಮತದಾರರ ಸಂಖ್ಯೆ ಹೀಗಿದೆ: ಕಮಲಾಪುರ – 6,101, ಮಹಾಗಾಂವ – 8,770, ನರೋಣಾ – 4,789, ಅವರಾದ (ಬಿ) – 5,768, ಕಲಬುರಗಿ – 3,553 ಹಾಗೂ ಶಹಾಬಾದ – 22,206. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಸಭೆಗಳ ಮೂಲಕ ಪಟ್ಟಿಯನ್ನು ಮರುಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

ಗಣತಿ ನಮೂನೆಗಳನ್ನು ಪಡೆದು ಇನ್ನೂ ಸಲ್ಲಿಸದ ಮತದಾರರು ಕೊನೆಯ ದಿನಾಂಕದವರೆಗೆ ಕಾಯದೆ ಕೂಡಲೇ ಭರ್ತಿ ಮಾಡಿದ ನಮೂನೆಯನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಸಲ್ಲಿಸುವಂತೆ ಮನವಿ ಮಾಡಿದರು. ಎ.ಎಸ್.ಡಿ.ಡಿ. ಸಂಖ್ಯೆ ಹೆಚ್ಚಿರುವ 161 ಮತಗಟ್ಟೆಗಳಲ್ಲಿ ಪಟ್ಟಿಯನ್ನು ಸಾರ್ವಜನಿಕರ ವೀಕ್ಷಣೆಗೆ ಈಗಾಗಲೇ ಪ್ರದರ್ಶಿಸಲಾಗಿದ್ದು, ತಪ್ಪುಗಳಿದ್ದರೆ ಬಿಎಲ್‌ಒ ಹಾಗೂ ಚುನಾವಣಾ ನೋಂದಣಾಧಿಕಾರಿಗಳ (ಇಆರ್‌ಒ) ಗಮನಕ್ಕೆ ತಂದು ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಒಬ್ಬ ಮತದಾರನ ಹೆಸರು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ನೋಂದಣಿಯಾಗಿರುವ ಪ್ರಕರಣಗಳು ಕಂಡುಬರುತ್ತಿವೆ. ಕಾನೂನಿನ ಪ್ರಕಾರ ಮತದಾರರು ಒಂದೇ ಕ್ಷೇತ್ರದಲ್ಲಿ ಮಾತ್ರ ಹೆಸರು ಹೊಂದಿರಬಹುದು. ಆದ್ದರಿಂದ ಪ್ರಸ್ತುತ ವಾಸಿಸುವ ಹಾಗೂ ಮತ ಚಲಾಯಿಸಲು ಬಯಸುವ ಕ್ಷೇತ್ರದಲ್ಲಿಯೇ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮನೆ ಬಾಗಿಲಿಗೇ ಜಾತಿ, ನಿವಾಸಿ ಪ್ರಮಾಣಪತ್ರ :

ರಾಜ್ಯ ಸರ್ಕಾರದ ನಿರ್ದೇಶನದಂತೆ ಎಸ್‌ಐಆರ್ ಪರಿಷ್ಕರಣೆ ಹಿನ್ನೆಲೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಮನೆ ಮನೆಗೆ ಜಾತಿ ಪ್ರಮಾಣಪತ್ರ ವಿತರಿಸುವ ಕಾರ್ಯ ಆರಂಭಿಸಲಾಗಿದೆ. ಅರ್ಜಿ ಸಲ್ಲಿಸುವವರಿಗೆ ನಿವಾಸಿ ಪ್ರಮಾಣಪತ್ರವನ್ನೂ ನೀಡಲಾಗುತ್ತಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಈ ದಾಖಲೆಗಳು ನೆರವಾಗಲಿವೆ ಎಂದು ಸಾಹಿತ್ಯ ಆಲದಕಟ್ಟಿ ತಿಳಿಸಿದರು.

2002ರ ಎಸ್‌ಐಆರ್ ಪಟ್ಟಿಯಲ್ಲಿ ಸ್ವಂತ ಹೆಸರು ಅಥವಾ ಸಂಬಂಧಿಕರ ಹೆಸರು ಇಲ್ಲದಿದ್ದರೂ, ಅಂತಹ ಮತದಾರರು ನಮೂನೆಯ ಕೊನೆಯ ಕಾಲಂ ಭರ್ತಿ ಮಾಡಿ ಸಲ್ಲಿಸಿದರೆ ಅವರ ಹೆಸರನ್ನು ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕಲಬುರಗಿ ತಹಶೀಲ್ದಾರ್‌ ಕೆ.ಆನಂದಶೀಲ, ಕಮಲಾಪುರ ತಹಶೀಲ್ದಾರ್ ಮುಹಮ್ಮದ್ ಮೋಸಿನ್ ಹಾಗೂ ಶಹಾಬಾದ ತಹಶೀಲ್ದಾರ ನೀಲಪ್ರಭಾ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News