ಕಲಬುರಗಿ ತೊಗರಿ ಬೇಳೆಗೆ ಜಾಗತಿಕ ಮನ್ನಣೆ: ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ
ನರೇಂದ್ರ ಮೋದಿ | Photo Credit : PTI
ಕಲಬುರಗಿ : ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ಕೊಂಡೊಯ್ಯುವ ‘ವೋಕಲ್ ಫಾರ್ ಲೋಕಲ್’ ಅಭಿಯಾನಕ್ಕೆ ಕಲಬುರಗಿಯ ತೊಗರಿ ಬೇಳೆ ಹೊಸ ಮೆರುಗು ನೀಡಿದೆ. ಕಲಬುರಗಿಯ ಜಿಐ ಟ್ಯಾಗ್ ಪಡೆದ ತೊಗರಿ ಬೇಳೆಯನ್ನು ಮಾಲ್ಡೀವ್ಸ್ಗೆ ರಫ್ತು ಮಾಡಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 139ನೇ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಶಂಸಿಸಿದ್ದು, ಜಿಲ್ಲೆಯ ರೈತರು ಹಾಗೂ ಕೃಷಿ ಕ್ಷೇತ್ರದ ವಲಯದಲ್ಲಿ ಸಂತಸ ಮೂಡಿಸಿದೆ.
ಹಬ್ಬದ ಸಂದರ್ಭದಲ್ಲಿ ಜನರು ಖರೀದಿಯಲ್ಲಿ ಸ್ವದೇಶಿ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಸ್ಥಳೀಯ ಉತ್ಪನ್ನಗಳು ಇದೀಗ ಜಾಗತಿಕ ಮಾರುಕಟ್ಟೆಗಳನ್ನೂ ತಲುಪುತ್ತಿವೆ ಎಂದು ಹೇಳಿದರು. ಬಿಹಾರದ ಪೂರ್ಣಿಯಾದ ಮಖಾನಾ ಗ್ರೀಸ್ಗೆ ತಲುಪುತ್ತಿದ್ದರೆ, ಕರ್ನಾಟಕದ ಕಲಬುರಗಿಯ ತೊಗರಿ ಬೇಳೆ ಮಾಲ್ಡೀವ್ಸ್ಗೆ ರಫ್ತಾಗುತ್ತಿದೆ. ಇದರಿಂದ ಭಾರತೀಯ ರೈತರಿಗೆ ಹೊಸ ಅಂತರರಾಷ್ಟ್ರೀಯ ಮಾರುಕಟ್ಟೆಗಳು ತೆರೆದುಕೊಳ್ಳುತ್ತಿವೆ ಎಂದು ಅವರು ಉಲ್ಲೇಖ ಮಾಡಿದರು.
ಕಲಬುರಗಿಯ ರಮೇಶ್ ಕಡಗಂಚಿ ಅವರು ಪುಣೆ ಮೂಲದ ಕಂಪನಿಯ ಮೂಲಕ 10 ಕ್ವಿಂಟಾಲ್ ಜಿಐ ಟ್ಯಾಗ್ ಪಡೆದ ತೊಗರಿ ಬೇಳೆಯನ್ನು ಮಾಲ್ಡೀವ್ಸ್ಗೆ ರಫ್ತು ಮಾಡಿದ್ದಾರೆ. ಸುಮಾರು ಎರಡು ತಿಂಗಳ ಹಿಂದೆ ನಡೆದ ಈ ರಫ್ತು ಪ್ರಕ್ರಿಯೆಯಲ್ಲಿ ರೈತರಿಗೆ ಮಾರುಕಟ್ಟೆ ಬೆಲೆಗಿಂತ ಶೇ. 30ರಷ್ಟು ಹೆಚ್ಚಿನ ದರ ನೀಡಲಾಗಿದೆ.
ಜಿಐ (GI tag) ಮಾನ್ಯತೆ ಹೊಂದಿರುವ ಕಲಬುರಗಿ ತೊಗರಿ ಬೇಳೆಗೆ ಪ್ರಾದೇಶಿಕ ಗುರುತು ಮತ್ತು ಗುಣಮಟ್ಟದ ಆಧಾರದ ಮೇಲೆ ಉತ್ತಮ ಮಾರುಕಟ್ಟೆ ಬೆಲೆ ದೊರೆಯುವ ನಿರೀಕ್ಷೆಯಿದೆ. ಮಾಲ್ಡೀವ್ಸ್ಗೆ ರಫ್ತು ಮಾಡಿರುವುದು ಈ ಉತ್ಪನ್ನದ ಅಂತರರಾಷ್ಟ್ರೀಯ ಮಾರುಕಟ್ಟೆ ವಿಸ್ತರಣೆಗೆ ಮಹತ್ವದ ಹೆಜ್ಜೆಯಾಗಿದೆ.
ಮುಂದಿನ ದಿನಗಳಲ್ಲಿ ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಬೇಳೆ ರಫ್ತು ಮಾಡಲು ಯೋಜಿಸಲಾಗಿದೆ. ಈ ಸಂಬಂಧ ವಿದೇಶಿ ಖರೀದಿದಾರರಿಗೆ ಮಾದರಿಗಳನ್ನು ಕಳುಹಿಸಲಾಗಿದ್ದು, ರಫ್ತು ಆದೇಶಗಳ ನಿರೀಕ್ಷೆಯಲ್ಲಿದ್ದೇವೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.
ಕಲಬುರಗಿ ಖಡಕ್ ರೊಟ್ಟಿಗೂ ಜಾಗತಿಕ ಮಾರುಕಟ್ಟೆ:
ಕಲಬುರಗಿಯ ಕೃಷಿ ಹಾಗೂ ಸಾಂಪ್ರದಾಯಿಕ ಆಹಾರ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸುವ ಪ್ರಯತ್ನಗಳು ಈ ಹಿಂದೆಯೂ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆದಿವೆ. ತಮ್ಮ ಹಿಂದಿನ ‘ಮನ್ ಕಿ ಬಾತ್’ ಕಾರ್ಯಕ್ರಮವೊಂದರಲ್ಲಿ ಕಲಬುರಗಿ ಖಡಕ್ ರೊಟ್ಟಿಯ ತಯಾರಿಕೆ ಮತ್ತು ಮಾರುಕಟ್ಟೆ ವಿಸ್ತರಣೆಯ ಪ್ರಯತ್ನಗಳನ್ನು ಅವರು ಶ್ಲಾಘಿಸಿದ್ದರು.
“ಕಲಬುರಗಿ ಭಾಗದ ಕೃಷಿ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವುದು ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ವಿಸ್ತರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಕಲಬುರಗಿ ಖಡಕ್ ರೊಟ್ಟಿ, ಕಮಲಾಪುರ ಕೆಂಪು ಬಾಳೆ ಸೇರಿದಂತೆ ಇಲ್ಲಿನ ರೈತರು ಉತ್ಪಾದಿಸುವ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಗುರುತು ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ. ಈ ಮೂಲಕ ರೈತರು ಮತ್ತು ಕಾರ್ಮಿಕರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ನಮ್ಮ ಉದ್ದೇಶ”
ಪ್ರಿಯಾಂಕ್ ಖರ್ಗೆ (ಗೃಹ, ಐಟಿಬಿಟಿ ಹಾಗೂ ಇ ಆಡಳಿತ, ಕಲಬುರಗಿ ಉಸ್ತುವಾರಿ ಸಚಿವ)
“ತೊಗರಿ ಬೇಳೆಯಲ್ಲಿರುವ ಪೌಷ್ಟಿಕ ಗುಣಗಳು ಹಾಗೂ ಅದರ ವಿಶಿಷ್ಟತೆಯಿಂದ ಕಲಬುರಗಿ ಭಾಗದ ಉತ್ಪನ್ನಕ್ಕೆ ಜಾಗತಿಕ ಮನ್ನಣೆ ದೊರೆತಿದೆ. ‘ವೋಕಲ್ ಫಾರ್ ಲೋಕಲ್’ ಅಭಿಯಾನದ ಭಾಗವಾಗಿ ಕಲಬುರಗಿ ತೊಗರಿ ಬೇಳೆಯನ್ನು ಮಾಲ್ಡೀವ್ಸ್ಗೆ ರಫ್ತು ಮಾಡಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್ ಕಿ ಬಾತ್’ನಲ್ಲಿ ಪ್ರಸ್ತಾಪಿಸಿರುವುದು ಹೆಮ್ಮೆಯ ಸಂಗತಿ. ಇದರಿಂದ ಮುಂದಿನ ದಿನಗಳಲ್ಲಿ ಗುಣಮಟ್ಟದ ತೊಗರಿ ಬೇಳೆಯ ವಹಿವಾಟು ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.”
ಸಮದ್ ಪಟೇಲ್, ಜಂಟಿ ಕೃಷಿ ನಿರ್ದೇಶಕರು, ಕಲಬುರಗಿ.