×
Ad

Kalaburagi | ವಾರ್ತಾಭಾರತಿ ವರದಿ ಫಲಶ್ರುತಿ : ಮಳಖೇಡ ಕೋಟೆ ಅಭಿವೃದ್ಧಿಗೆ ಸರ್ಕಾರದಿಂದ ಕ್ರಮ

Update: 2026-05-14 21:53 IST

ಕಲಬುರಗಿ : ಸೇಡಂ ತಾಲೂಕಿನ ಮಳಖೇಡ ಕೋಟೆಯ ಕುರಿತು “ತಿಪ್ಪೆಗುಂಡಿ, ಸ್ಮಶಾನದಂತಾದ ವಿಶ್ವಶ್ರೇಷ್ಠ ರಾಷ್ಟ್ರಕೂಟ ಕೋಟೆ” ಎಂಬ ಶೀರ್ಷಿಕೆಯಡಿ ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಸ್ಪಂದನೆ ಸಿಕ್ಕಿದೆ.

ಕಳೆದ ಜನವರಿ 21ರಂದು ಪ್ರಕಟವಾದ ವಿಶೇಷ ವರದಿಯಲ್ಲಿ ವಿಶ್ವಶ್ರೇಷ್ಠ ರಾಷ್ಟ್ರಕೂಟರ ಕೋಟೆಯಾಗಿರುವ ಮಳಖೇಡ ಕೋಟೆಯ ದುಸ್ಥಿತಿ ಹಾಗೂ ಅಭಿವೃದ್ಧಿಯ ಅಗತ್ಯತೆ ಕುರಿತು ಬೆಳಕು ಚೆಲ್ಲಲಾಗಿತ್ತು. ಈ ಹಿನ್ನೆಲೆಯಲ್ಲಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈಗಾಗಲೇ ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ಕೋಟೆಯ ದಕ್ಷಿಣ ಭಾಗದ ಕೋಟೆಗೋಡೆಗಳ ಸಂರಕ್ಷಣೆ ಕಾಮಗಾರಿ ಕೈಗೊಳ್ಳಲಾಗಿದ್ದು, ಉಳಿದ ಭಾಗಗಳ ಕಾಮಗಾರಿಯನ್ನು ಅನುದಾನ ಲಭ್ಯತೆಗೆ ಅನುಗುಣವಾಗಿ ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.

2024-25ನೇ ಸಾಲಿನ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೋಟೆ ಅಭಿವೃದ್ಧಿಗೆ 34 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಮೂರನೇ ಭಾಗದ ಅನುದಾನವನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಭರಿಸಲು ಅನುಮತಿ ನೀಡಲಾಗಿದೆ ಎಂದು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕಲಬುರಗಿ ಉಪನಿರ್ದೇಶಕಿ ಸಿ.ಎನ್. ಮಂಜುಳಾ ತಿಳಿಸಿದ್ದಾರೆ.

ಈಗಾಗಲೇ 6 ಕೋಟಿ ರೂ. ಮೊತ್ತದ ಕಾಮಗಾರಿಗೆ 40 ಶೇಕಡಾ ಅನುದಾನವನ್ನು ಇಲಾಖೆಗೆ ಬಿಡುಗಡೆ ಮಾಡಲಾಗಿದೆ. ಕಾಮಗಾರಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದ್ದು, ಅನುಷ್ಠಾನಕ್ಕಾಗಿ ಕಾರ್ಯಾದೇಶ ನೀಡಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಮುಖ್ಯಮಂತ್ರಿಗಳ ವಿಶೇಷ ಕಾರ್ಯಾಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿ ನೀಡಲಾಗಿದೆ.

ವಿಶ್ವಶ್ರೇಷ್ಠ ರಾಷ್ಟ್ರಕೂಟರ ಕೋಟೆಯನ್ನು ಸಂರಕ್ಷಿಸಿ ಪ್ರಮುಖ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಬಾಕಿ ಉಳಿದ ಕಾಮಗಾರಿಗಳನ್ನು ಕೂಡ ಶೀಘ್ರ ಪೂರ್ಣಗೊಳಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News