ಕಲಬುರಗಿ: ನವ ಭಾರತ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಮಹತ್ವದ್ದಾಗಿದೆ. ಆರೋಗ್ಯವಂತ ಹಾಗೂ ಸದೃಢ ಸಮಾಜ ನಿರ್ಮಾಣಕ್ಕಾಗಿ ಯುವಕರು ದುಶ್ಚಟಗಳಿಂದ ದೂರವಿದ್ದು, ಕ್ರೀಡೆ, ವ್ಯಾಯಾಮ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ಕರೆ ನೀಡಿದರು.

ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ‘ಬೇಡ ಬ್ರೋ’, ‘ಆಪರೇಷನ್ ರೈಸ್’, ‘ನಶಾಮುಕ್ತ ಯುವ ಕರ್ನಾಟಕ’ ಹಾಗೂ ಅಂಗಾಂಗ ದಾನ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಬೃಹತ್ ವಾಕ್‌ಥಾನ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇಲಾಖೆ ರಾಜ್ಯಾದ್ಯಂತ ‘ಬೇಡ ಬ್ರೋ’ ಹಾಗೂ ‘ಆಪರೇಷನ್ ರೈಸ್’ ಅಭಿಯಾನಗಳನ್ನು ನಡೆಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವೂ ಈ ಅಭಿಯಾನಕ್ಕೆ ಕೈಜೋಡಿಸಿದ್ದು, ಕಲಬುರಗಿಯಲ್ಲಿ 17ನೇ ಜಿಲ್ಲಾ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಯುವಜನತೆ ‘ಸೇ ನೋ ಟು ಡ್ರಗ್ಸ್, ಸೇ ಯೆಸ್ ಟು ಲೈಫ್, ಸೇ ಯೆಸ್ ಟು ಫಿಟ್’ ಎಂಬುದನ್ನು ಜೀವನದ ಮೂಲಮಂತ್ರವನ್ನಾಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ವ್ಯಸನಕ್ಕೆ ದಾರಿ ಮಾಡಿಕೊಡುವ ಕೆಟ್ಟ ಸಹವಾಸದಿಂದ ದೂರವಿರಬೇಕು. ಸ್ನೇಹಿತರಲ್ಲಿ ಯಾರಾದರೂ ವ್ಯಸನದ ಜಾಲಕ್ಕೆ ಸಿಲುಕಿರುವುದು ಕಂಡುಬಂದರೆ ಅವರನ್ನು ದೂರ ಮಾಡದೆ, ವ್ಯಸನದಿಂದ ಹೊರಬರಲು ನೆರವಾಗಬೇಕು ಎಂದು ಹೇಳಿದರು.

ಪ್ರತಿದಿನ ಕನಿಷ್ಠ ಒಂದು ಗಂಟೆಯನ್ನು ವ್ಯಾಯಾಮ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೀಸಲಿಡಬೇಕು. ದೈಹಿಕ ಆರೋಗ್ಯದ ಜತೆಗೆ ಉತ್ತಮ ಮಾನಸಿಕ ಆರೋಗ್ಯಕ್ಕೂ ಕ್ರೀಡೆ ಹಾಗೂ ವ್ಯಾಯಾಮ ಅಗತ್ಯ. ಇವು ಒತ್ತಡ ಕಡಿಮೆ ಮಾಡುವುದರ ಜತೆಗೆ ಆತ್ಮವಿಶ್ವಾಸ ಹಾಗೂ ಸಕಾರಾತ್ಮಕ ಚಿಂತನೆ ಬೆಳೆಸುತ್ತವೆ ಎಂದರು.

ಮಾದಕ ವಸ್ತುಗಳ ಮಾರಾಟ ಸೇರಿದಂತೆ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದರೆ ಸಾರ್ವಜನಿಕರು ಧೈರ್ಯದಿಂದ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸಚಿವರು ಮನವಿ ಮಾಡಿದರು.

ಮೂರು ವರ್ಷದಲ್ಲಿ 22,899 ಪ್ರಕರಣ ದಾಖಲು:

ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಎಸ್.ಡಿ. ಶರಣಪ್ಪ ಮಾತನಾಡಿ, ಕರ್ನಾಟಕ ಹಾಗೂ ಕಲಬುರಗಿ ನಗರವನ್ನು ಮಾದಕ ವಸ್ತು ಮುಕ್ತಗೊಳಿಸಲು ಪೊಲೀಸ್ ಇಲಾಖೆ ಸಂಕಲ್ಪ ತೊಟ್ಟಿದೆ. ಇದಕ್ಕಾಗಿ ‘ಆಪರೇಷನ್ ರೈಸ್’ ಹಾಗೂ ‘ಬೇಡ ಬ್ರೋ’ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ. ಮಾದಕ ವಸ್ತುಗಳ ನಿರ್ಮೂಲನೆ ಕೇವಲ ಪೊಲೀಸ್ ಇಲಾಖೆಯಿಂದ ಸಾಧ್ಯವಿಲ್ಲ. ಯುವಜನತೆ, ಸಮುದಾಯ ಹಾಗೂ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ ಎಂದರು.

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಮಾದಕ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ 22,899 ಪ್ರಕರಣಗಳು ದಾಖಲಾಗಿದ್ದು, 795 ಕೋಟಿ ಮೌಲ್ಯದ 28,292 ಕೆ.ಜಿ. ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 31,271 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಈವರೆಗೆ 9,556 ಮಂದಿಗೆ ಶಿಕ್ಷೆಯಾಗಿದೆ ಎಂದು ಮಾಹಿತಿ ನೀಡಿದರು.

ಹಿಂದೆ ಮಾದಕ ವಸ್ತುಗಳ ಮಾರಾಟಗಾರರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಲಾಗುತ್ತಿತ್ತು. ಇದೀಗ ಸೇವನೆ ಮಾಡುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಮಾದಕ ವಸ್ತುಗಳ ಸೇವನೆ ಅಥವಾ ಮಾರಾಟದ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ತಕ್ಷಣ 112 ತುರ್ತು ಸಹಾಯವಾಣಿಗೆ ಮಾಹಿತಿ ನೀಡಬಹುದು ಎಂದರು.

ಮಾದಕ ವಸ್ತುಗಳ ವ್ಯಸನಕ್ಕೆ ಸಿಲುಕಿರುವ 480 ಮಂದಿಯನ್ನು ನಗರದ ವಿವಿಧೆಡೆ ಗುರುತಿಸಲಾಗಿದ್ದು, ‘ಸನ್ಮಿತ್ರ’ ಯೋಜನೆಯಡಿ ಅವರನ್ನು ದುಶ್ಚಟದಿಂದ ಹೊರತರಲು ಪ್ರಯತ್ನಿಸಲಾಗುತ್ತಿದೆ. ಈವರೆಗೆ 200 ಯುವಕರನ್ನು ವ್ಯಸನದಿಂದ ಹೊರತರಲಾಗಿದೆ ಎಂದು ತಿಳಿಸಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ಮಾತನಾಡಿ, ಸಮಾಜ ಹಾಗೂ ರಾಜ್ಯ ಆರೋಗ್ಯವಂತವಾಗಬೇಕಾದರೆ ಮೊದಲು ಕಾಲೇಜು ಆವರಣಗಳು ನಶಾಮುಕ್ತವಾಗಬೇಕು. ಇದಕ್ಕಾಗಿ ಸಾಮೂಹಿಕ ಹೋರಾಟ ಅಗತ್ಯವಿದೆ ಎಂದರು.

18 ರಿಂದ 30 ವರ್ಷದೊಳಗಿನ ಯುವಕರು ಹಾಗೂ ವಿದ್ಯಾರ್ಥಿಗಳು ಮಾದಕ ವಸ್ತುಗಳ ಜಾಲಕ್ಕೆ ಸಿಲುಕುತ್ತಿರುವುದು ಆತಂಕಕಾರಿ. ಇದು ಜೀವನವನ್ನು ಕಟ್ಟಿಕೊಳ್ಳುವ ವಯಸ್ಸು. ಒಂದು ತಪ್ಪು ನಿರ್ಧಾರ, ತಪ್ಪು ಸ್ನೇಹ ಅಥವಾ ಕ್ಷಣಿಕ ಕುತೂಹಲ ಇಡೀ ಕುಟುಂಬದ ಭವಿಷ್ಯವನ್ನೇ ಹಾಳು ಮಾಡಬಹುದು. ಹೀಗಾಗಿ ಯುವಜನತೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಅವರು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ:

ಕಾರ್ಯಕ್ರಮದಲ್ಲಿ ಕುಲಪತಿ ಡಾ. ಭಗವಾನ್ ಬಿ.ಸಿ. ಅವರು ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯಕ್ಕೆ ನಶಾಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಮಾದಕ ವಸ್ತುಗಳನ್ನು ತ್ಯಜಿಸುವ ಹಾಗೂ ಅಂಗಾಂಗ ದಾನ ಮಾಡುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.

ಇದೇ ಸಂದರ್ಭದಲ್ಲಿ ಜಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ಜೀವನದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಕಿರು ನಾಟಕ ಪ್ರದರ್ಶಿಸಿ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಶಶೀಲ ಜಿ. ನಮೋಶಿ, ಬಿ.ಜಿ. ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಐಜಿಪಿ ಶಾಂತನು ಸಿನ್ಹಾ, ಪೊಲೀಸ್ ಆಯುಕ್ತ ಡಾ. ಎಸ್.ಡಿ. ಶರಣಪ್ಪ, ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಜಿಪಂ ಸಿಇಒ ರಾಹುಲ್ ಸಂಕನೂರ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಹೆಚ್ಚುವರಿ ಎಸ್‌ಪಿ ಮಹೇಶ್ ಮೇಘಣ್ಣನವರ, ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ ಸಿ.ಆರ್., ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಎಂ.ಡಿ. ರಫೀಕ್, ಸೆನೆಟ್ ಸದಸ್ಯ ಡಾ. ಅರವಿಂದ ಕಟ್ಟಿ ಸೇರಿದಂತೆ ವಿವಿಧ ಅಧಿಕಾರಿಗಳು, ವೈದ್ಯರು, ಬೋಧಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮದ ಬಳಿಕ ಡಿಎಆರ್ ಪೊಲೀಸ್ ಪರೇಡ್ ಮೈದಾನದಿಂದ ಬೃಹತ್ ವಾಕ್‌ಥಾನ್‌ಗೆ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ಚಾಲನೆ ನೀಡಿದರು. ಸಚಿವರು ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕುವ ಮೂಲಕ ಅಭಿಯಾನಕ್ಕೆ ಉತ್ತೇಜನ ನೀಡಿದರು.

ವಾಕ್‌ಥಾನ್ ಏಷ್ಯನ್ ಮಾಲ್, ಐವಾನ್-ಎ-ಶಾಹಿ, ಜಿಲ್ಲಾಧಿಕಾರಿ ಕಚೇರಿ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ ಹಾಗೂ ಆರ್ಕಿಡ್ ಮಾಲ್ ಮಾರ್ಗವಾಗಿ ಸಾಗಿ ಮರಳಿ ಡಿಎಆರ್ ಪೊಲೀಸ್ ಮೈದಾನದ ಹೆಲಿಪ್ಯಾಡ್ ಬಳಿ ಮುಕ್ತಾಯಗೊಂಡಿತು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸಂಯೋಜಿತ ವಿವಿಧ ಕಾಲೇಜುಗಳ 8 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಬೋಧಕರು ಹಾಗೂ ಸಿಬ್ಬಂದಿ ವಾಕ್‌ಥಾನ್‌ನಲ್ಲಿ ಭಾಗವಹಿಸಿ ನಶಾಮುಕ್ತ ಕರ್ನಾಟಕ ನಿರ್ಮಾಣದ ಸಂದೇಶ ಸಾರಿದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor