ಕಲಬುರಗಿ: ಗುಲಬರ್ಗಾ ಜನ ಶಿಕ್ಷಣ ಸಂಸ್ಥಾನ ಹಾಗೂ ಕಲಬುರಗಿ ಕೇಂದ್ರ ಕಾರಾಗೃಹದ ಸಹಯೋಗದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಯೋಜನೆಯಡಿ ಕಾರಾಗೃಹದ 40 ಮಂದಿ ಶಿಕ್ಷಾ ಬಂಧಿಗಳಿಗೆ ನೀಡಲಾಗಿದ್ದ ಎಲೆಕ್ಟ್ರಿಷಿಯನ್ ತರಬೇತಿಯ ಮೌಲ್ಯಮಾಪನ ಕಾರ್ಯಕ್ರಮ ನಡೆಯಿತು.

ಕಳೆದ ಜುಲೈ 5ರಿಂದ ಆರಂಭಗೊಂಡಿದ್ದ ಎಲೆಕ್ಟ್ರಿಷಿಯನ್ ತರಬೇತಿಯನ್ನು ಬಂಧಿಗಳು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ತರಬೇತಿಯ ಸಂದರ್ಭದಲ್ಲಿ ಕಲಿತಿರುವ ಕೌಶಲ್ಯ ಹಾಗೂ ಪ್ರಾಯೋಗಿಕ ಜ್ಞಾನವನ್ನು ಮೌಲ್ಯಮಾಪನ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಕಲಬುರಗಿ ಕೇಂದ್ರ ಕಾರಾಗೃಹದ ಮಹಿಳಾ ಮತ್ತು ಪುರುಷ ಬಂದಿಗಳಿಗಾಗಿ “Essentials of Catering and Event and Fine Making” ತರಬೇತಿ ಕಾರ್ಯಕ್ರಮಕ್ಕೂ ಮಂಗಳವಾರ ಚಾಲನೆ ನೀಡಲಾಯಿತು. ಬಂಧಿಗಳಲ್ಲಿ ವೃತ್ತಿಪರ ಕೌಶಲ್ಯಗಳನ್ನು ಬೆಳೆಸುವ ಮೂಲಕ ತರಬೇತಿಯ ನಂತರ ಸ್ವಾವಲಂಬಿ ಜೀವನ ನಡೆಸಲು ಅಗತ್ಯವಾದ ಅವಕಾಶಗಳನ್ನು ಕಲ್ಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ಕಾರ್ಯಕ್ರಮದಲ್ಲಿ ಗುಲಬರ್ಗಾ ಜನ ಶಿಕ್ಷಣ ಸಂಸ್ಥಾನದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಸೈಯದ್ ಬಿಲಾನ್, ಸುರೇಂದ್ರ ಪಾಟೀಲ್, ಬಸವರಾಜ ಡಾಬಾ ಹಾಗೂ ರಾಜಶೇಖರ ಬಿರಾದಾರ್, ಕಲಬುರಗಿ ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಚನ್ನಪ್ಪ, ಲೋಕೇಶ್ ಟಿ., ಜೈಲರ್‌ಗಳಾದ ಚನ್ನಮ್ಮ ಬಿದರಿ ಹಾಗೂ ಕಾಂತಪ್ಪ ಪಾಟೀಲ್ ಮತ್ತು ಶಿಕ್ಷಕ ನಾಗರಾಜ ಮುಲಗೆ ಉಪಸ್ಥಿತರಿದ್ದರು.

ಕಾರಾಗೃಹದಲ್ಲಿರುವ ಬಂದಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಬೆಳೆಸುವುದು, ಉದ್ಯೋಗಾವಕಾಶಗಳಿಗೆ ಸಿದ್ಧಗೊಳಿಸುವುದು ಹಾಗೂ ಸಮಾಜದ ಮುಖ್ಯವಾಹಿನಿಗೆ ಮರಳಲು ಅಗತ್ಯವಾದ ಕೌಶಲ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ತರಬೇತಿ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor