ಶಾಸಕ ಬಿ.ಆರ್.ಪಾಟೀಲ್ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಆಳಂದದಲ್ಲಿ ಬೃಹತ್ ಪ್ರತಿಭಟನೆ
ಹರ್ಷಾನಂದ ಗುತ್ತೇದಾರ ವಿರುದ್ಧ ಆಕ್ರೋಶ
ಆಳಂದ: ಶಾಸಕ ಹಾಗೂ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಅವರನ್ನು ಶ್ವಾನಕ್ಕೆ ಹೋಲಿಸಿ ಏಕವಚನದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ ಆಳಂದ ತಾಲೂಕಿನಲ್ಲಿ ರಾಜಕೀಯ ಸಂಘರ್ಷ ತೀವ್ರಗೊಂಡಿದೆ.
ಹೇಳಿಕೆಯನ್ನು ಖಂಡಿಸಿ ವೀರಶೈವ ಲಿಂಗಾಯತ ಮಹಾಸಭೆಯ ನೇತೃತ್ವದಲ್ಲಿ ಬುಧವಾರ ಆಳಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ ಬಸ್ ನಿಲ್ದಾಣ ವೃತ್ತ ತಲುಪಿತು. ಅಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ವಿವಿಧ ಮುಖಂಡರು ಮಾತನಾಡಿ, ಹರ್ಷಾನಂದ ಗುತ್ತೇದಾರ ಹಾಗೂ ಅವರ ತಂದೆ, ಮಾಜಿ ಶಾಸಕ ಸುಭಾಷ್ ಗುತ್ತೇದಾರ ಅವರ ಹೇಳಿಕೆ ಮತ್ತು ರಾಜಕೀಯ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿದರು. ಸಭೆಯ ಕೊನೆಯಲ್ಲಿ ಹರ್ಷಾನಂದ ಗುತ್ತೇದಾರ ಅವರ ಪ್ರತಿಕೃತಿಯನ್ನು ದಹಿಸಲಾಯಿತು.
ಶಾಸಕ ಬಿ.ಆರ್. ಪಾಟೀಲ ಅವರು ಕೇವಲ ಆಳಂದ ತಾಲೂಕಿಗೆ ಸೀಮಿತವಾದ ನಾಯಕರಲ್ಲ. ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ರೈತರ ಹೋರಾಟ, ನೀರಾವರಿ ಸಮಸ್ಯೆ ಮತ್ತು ವ್ಯಸನಮುಕ್ತ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರೈತರ ಹಾಗೂ ನೀರಾವರಿ ಸಮಸ್ಯೆಗಳ ಕುರಿತು ನಿರಂತರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯುತ್ತಿದ್ದಾರೆ. ಇಂತಹ ಹಿರಿಯ ನಾಯಕರ ವಿರುದ್ಧ ರಾಜಕೀಯ ಭಿನ್ನಾಭಿಪ್ರಾಯದ ಹೆಸರಿನಲ್ಲಿ ಅವಹೇಳನಕಾರಿ ಭಾಷೆ ಬಳಸುವುದು ಸರಿಯಲ್ಲ. ಸಾರ್ವಜನಿಕ ಜೀವನದಲ್ಲಿ ಭಾಷೆಯ ಮಿತಿ ಹಾಗೂ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದು ಮುಖಂಡರು ಅಭಿಪ್ರಾಯಪಟ್ಟರು.
ಕೆಪಿಸಿಸಿ ಸದಸ್ಯ ಗುರುಶರಣ ಪಾಟೀಲ ಕೊರಳ್ಳಿ, ಜಿಲ್ಲಾ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಶರಣಬಸಪ್ಪ ಭೂಸನೂರ, ಪಂಡಿತ್ ಶೇರಿಕಾರ್, ಡಾ. ರಾಜಶೇಖರ ಪಾಟೀಲ ಹೆಬಳಿ, ಹನುಮಂತ ಖ್ಯಾಬ್ದಿ ನೆಲ್ಲೂರ, ಮಲ್ಲಿಕಾರ್ಜುನ ಉಪ್ಪಿನ ಮಾಡ್ಯಾಳ ಹಾಗೂ ಬಸವರಾಜ ಕೊಟ್ಟರಕಿ ಮಾತನಾಡಿದರು.
ಸಂತೋಷ ವಾಲೆ, ಲಿಂಗರಾಜ ಪಾಟೀಲ, ಶಿವಪುತ್ರಪ್ಪ ಪಾಟೀಲ, ಅಪ್ಪಾರಾವ್ ಜವಳಿ, ಶರಣು ಕುಲಕರ್ಣಿ, ಸಿದ್ಧರಾಮ ದೇಸಾಯಿ, ಸಂತೋಷ ಬೀದಿ ಕೊರಳ್ಳಿ, ಸಿದ್ಧಾರಾಮ ಪ್ಯಾಟೆ, ಗಣೇಶ ಪಾಟೀಲ, ತಥಾಗತ ಮೂಲಭಾರತಿ, ದಿಲೀಪ ಕ್ಷೀರಸಾಗರ, ಪ್ರಕಾಶ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.