ಯಡ್ರಾಮಿಯಲ್ಲಿ ನಾಳೆ ನೂತನ ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟನೆ
ಯಡ್ರಾಮಿ: ತಾಲೂಕು ಕೇಂದ್ರದಲ್ಲಿ ನೂತನವಾಗಿ ಸ್ಥಾಪಿಸಲಾದ ಸಿವಿಲ್ ಜಡ್ಜ್ (ಜೂನಿಯರ್ ವಿಭಾಗ) ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಉದ್ಘಾಟನಾ ಸಮಾರಂಭ ನವೆಂಬರ್ 14ರಂದು (ಶನಿವಾರ) ಸಂಜೆ 4 ಗಂಟೆಗೆ ಜರುಗಲಿದೆ.
ಕಲಬುರಗಿ ಜಿಲ್ಲಾ ನ್ಯಾಯಾಂಗ ಇಲಾಖೆ ಹಾಗೂ ಜೇವರ್ಗಿ ಮತ್ತು ಯಡ್ರಾಮಿ ವಕೀಲರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಕಲಬುರಗಿ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಶಿವಶಂಕರ್ ಅಮರಣ್ಣವರ ಅವರು ನೂತನ ನ್ಯಾಯಾಲಯವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಅರಳಗುಂಡಗಿ ರಸ್ತೆಯ ಶ್ರೀ ಜನನಿ ಮಂಗಳ ಕಾರ್ಯಾಲಯದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರಂ ಸಿಂಗ್ ಹಾಗೂ ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಲ್. ಲಕ್ಷ್ಮಿನಾರಾಯಣ, ಯಡ್ರಾಮಿ ವಕೀಲರ ಸಂಘದ ಅಧ್ಯಕ್ಷ ಪಿ.ಎಸ್. ಮಾಲಿಪಾಟೀಲ್ ಬಾಲಬಟ್ಟಿ, ಜೇವರ್ಗಿ ವಕೀಲರ ಸಂಘದ ಅಧ್ಯಕ್ಷ ಎಸ್.ಎ. ಪಾಟೀಲ್ ನರಿಬೋಳ, ಯಡ್ರಾಮಿ ವಕೀಲರ ಸಂಘದ ಕಾರ್ಯದರ್ಶಿ ಎಂ.ಎಸ್. ಮಂಡೇವಾಳ ಸೇರಿದಂತೆ ನ್ಯಾಯಾಂಗ ಅಧಿಕಾರಿಗಳು, ವಕೀಲರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.
ಸ್ಥಳೀಯ ನ್ಯಾಯಾಂಗ ವ್ಯವಸ್ಥೆಗೆ ಬಲ: ಯಡ್ರಾಮಿ ತಾಲೂಕಿನಲ್ಲಿ ನೂತನ ನ್ಯಾಯಾಲಯ ಸ್ಥಾಪನೆಯಾಗಿರುವುದು ಸ್ಥಳೀಯ ನ್ಯಾಯಾಂಗ ವ್ಯವಸ್ಥೆಯ ಬಲವರ್ಧನೆಗೆ ಮಹತ್ವದ ಹೆಜ್ಜೆಯಾಗಿದೆ. ಇದರಿಂದ ಯಡ್ರಾಮಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ನ್ಯಾಯಕ್ಕಾಗಿ ದೂರದ ನ್ಯಾಯಾಲಯಗಳಿಗೆ ಅಲೆದಾಡುವ ಅನಿವಾರ್ಯತೆ ತಪ್ಪಲಿದೆ. ಸಮಯ, ಪ್ರಯಾಣದ ವೆಚ್ಚ ಉಳಿತಾಯವಾಗುವುದರ ಜತೆಗೆ ಸಾರ್ವಜನಿಕರಿಗೆ ಸ್ಥಳೀಯವಾಗಿಯೇ ನ್ಯಾಯಾಂಗ ಸೇವೆಗಳು ಲಭ್ಯವಾಗಲಿವೆ. ಬಹುದಿನಗಳ ಸಾರ್ವಜನಿಕರು ಹಾಗೂ ವಕೀಲರ ಸಂಘದ ಬೇಡಿಕೆ ಈಡೇರಿದಂತಾಗಿದ್ದು, ನೂತನ ನ್ಯಾಯಾಲಯದ ಆರಂಭದ ಕುರಿತು ತಾಲೂಕಿನಲ್ಲಿ ಸಂತಸ ವ್ಯಕ್ತವಾಗಿದೆ.