ಕಲಬುರಗಿ: ರೈತರ ಹಿತ ಕಾಪಾಡಲು ರಾಜ್ಯ ಸರಕಾರ ಈಗಾಗಲೇ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದೆ. ರೈತರು ಯಾವುದೇ ಪ್ರಚೋದನೆಗೆ ಒಳಗಾಗದೆ ಸರಕಾರದೊಂದಿಗೆ ಕೈಜೋಡಿಸಬೇಕು. ರೈತರು ಒಂದು ಹೆಜ್ಜೆ ಮುಂದೆ ಬಂದರೆ ಸರಕಾರವೂ ಒಂದು ಹೆಜ್ಜೆ ಮುಂದೆ ಬರಲಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಭಾಗದಲ್ಲಿ ನೀಡುವ ದರವನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ನೀಡಲು ಸಾಧ್ಯವಿಲ್ಲ. ಅಲ್ಲಿನ ಕೃಷಿ ಇಳುವರಿಯೇ ಬೇರೆ, ನಮ್ಮ ಭಾಗದ ಇಳುವರಿಯೇ ಬೇರೆ. ಈ ವ್ಯತ್ಯಾಸವನ್ನು ಗಮನಿಸಬೇಕಿದೆ. ರೈತರ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರಕಾರ ತನ್ನಿಂದಾದ ಎಲ್ಲ ಪ್ರಯತ್ನ ಮಾಡಿದೆ. ಆದರೆ ಕೇಂದ್ರ ಸರಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

ರೈತರ ಆದಾಯವನ್ನು ದುಪ್ಪಟ್ಟು ಮಾಡುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಈಗ ರೈತರ ನೆರವಿಗೆ ಏನು ಮಾಡುತ್ತಿದೆ? ರಾಜ್ಯ ಸರ್ಕಾರ ಹೂಡಿಕೆ ಮಾಡಿರುವ ಯೋಜನೆಗಳನ್ನು ಉದ್ಘಾಟಿಸುವುದಷ್ಟೇ ಕೇಂದ್ರದ ಕೆಲಸವೇ? ಎಂದು ಪ್ರಶ್ನಿಸಿದರು.  

ಎನ್‌ಡಿಆರ್‌ಎಫ್ ಅನುದಾನದ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆಯೇ? ನಮ್ಮ ತೆರಿಗೆ ಹಣವನ್ನು ಪಡೆದು ಲಕ್ಷದೀಪೋತ್ಸವ ಮಾಡುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರವೇ ಹೆಚ್ಚಿನ ಅನುದಾನ ನೀಡಿದೆ. ಸಾಲದ ವಿಚಾರದಲ್ಲಿ ರಾಜ್ಯದ ಹಣಕಾಸು ಕೊರತೆ ಪ್ರಮಾಣವನ್ನು ಗಮನಿಸಬೇಕು. ಸಾಲವನ್ನು ಮರುಪಾವತಿಸುವ ಜವಾಬ್ದಾರಿ ರಾಜ್ಯ ಸರಕಾರದ್ದೇ ಆಗಿದೆ. ಬಿಎಂಆರ್‌ಸಿಎಲ್‌ನಲ್ಲಿ ರಾಜ್ಯ ಸರಕಾರವೂ ಪಾಲುದಾರ ಸಂಸ್ಥೆಯಾಗಿದೆ. ಬಿಜೆಪಿಯವರು ಈ ಅಂಶಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ನಿಗಮ ಮಂಡಳಿ ನೇಮಕಾತಿಯಲ್ಲಿ ಲೋಪ: ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡುವಾಗ ಕೆಲವೊಂದು ಲೋಪಗಳಾಗಿವೆ ಎಂಬುದನ್ನು ಒಪ್ಪಿಕೊಂಡ ಅವರು, ಈ ಪಟ್ಟಿ ಒಂದೂವರೆ ವರ್ಷದ ಹಿಂದೆಯೇ ಸಿದ್ಧಪಡಿಸಲಾಗಿತ್ತು. ಶಾಸಕರಿಗೆ ಹೆಚ್ಚಿನ ಆಯ್ಕೆ ಸ್ವಾತಂತ್ರ್ಯ ನೀಡಲಾಗಿತ್ತು. ಕೆಲವು ಕಡೆ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಸ್ಥಾನ ನೀಡಲಾಗಿದೆ ಎಂಬ ಆರೋಪಗಳಿವೆ. ಆದರೆ ಅವರು ಈಗ ಆರ್‌ಎಸ್‌ಎಸ್ ತೊರೆದು ಬಂದಿರಬಹುದು ಎಂದು ಹೇಳಿದರು.

ಎಸ್‌ಐಆರ್ ಪ್ರಕ್ರಿಯೆ ಬೋಗಸ್ ಎಂಬುದು ಸಾಬೀತಾಗಿದೆ ಎಂದು ಆರೋಪಿಸಿದ ಪ್ರಿಯಾಂಕ್ ಖರ್ಗೆ, ಉತ್ತರ ಪ್ರದೇಶದಲ್ಲಿಯೂ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಗಂಭೀರ ಆರೋಪಗಳು ಕೇಳಿಬಂದಿವೆ. ಒಂದೂವರೆ ಕೋಟಿ ಹಿಂದೂಗಳ ಮತಗಳನ್ನು ಅಳಿಸಲಾಗಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಹೇಳಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಈಗ ಹೆಚ್ಚು ಸಕ್ರಿಯವಾಗಿದೆ. ಉತ್ತರ ಪ್ರದೇಶದ ದಾಖಲೆಗಳನ್ನು ಎರಡು-ಮೂರು ದಿನಗಳಲ್ಲಿ ನೀಡುತ್ತೇನೆ ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಕುರಿತು ರಾಜ್ಯ ಚುನಾವಣಾ ಆಯೋಗವೇ ನಿರ್ಧಾರ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಅಧಿವೇಶನದ ಬಳಿಕ ರಾಜ್ಯಕ್ಕೆ ಮೂರನೇ ಮುಖ್ಯಮಂತ್ರಿ ಬರಲಿದ್ದಾರೆ ಎಂಬ ಮಾಜಿ ಸಚಿವ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೊದಲು ಈ ಬಾರಿ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದನ್ನು ನೋಡಿಕೊಳ್ಳಲಿ. ಅವರು ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಪ್ರಧಾನಿ ಮೋದಿ ಅಥವಾ ಅಮಿತ್ ಶಾ ಅವರ ಕಿವಿಯಲ್ಲಿ ಬಂದು ಹೇಳಿದ್ದಾರೆಯೇ ಎಂಬುದನ್ನು ಅವರನ್ನೇ ಕೇಳಬೇಕು ಎಂದು ವ್ಯಂಗ್ಯವಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor