ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಒಂದು ಸ್ಥಾನಕ್ಕೆ ಶುಕ್ರವಾರ ಕಲಬುರಗಿ ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಜಿಲ್ಲೆಯ ಒಟ್ಟು 40 ಮತಗಟ್ಟೆಗಳಲ್ಲಿ ಶೇ.84.38ರಷ್ಟು ಮತದಾನವಾಗಿದೆ ಎಂದು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.

ಕಲಬುರಗಿ ನಗರದಲ್ಲಿ 10 ಮತಗಟ್ಟೆಗಳು ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 40 ಮತಗಟ್ಟೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ.

ಜಿಲ್ಲೆಯಲ್ಲಿ ಒಟ್ಟು 10,652 ಮತದಾರರಿದ್ದು, ಅವರಲ್ಲಿ 5,672 ಪುರುಷರು ಹಾಗೂ 4,980 ಮಹಿಳೆಯರಿದ್ದಾರೆ. ಈ ಪೈಕಿ 5,002 ಪುರುಷರು ಮತ್ತು 3,986 ಮಹಿಳೆಯರು ಸೇರಿ ಒಟ್ಟು 8,988 ಮಂದಿ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಶೇ.84.38ರಷ್ಟು ಮತದಾನ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸೇಡಂ ತಾಲೂಕಿನ ಅಡಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 91ರಲ್ಲಿ 15 ಪುರುಷರು ಹಾಗೂ 9 ಮಹಿಳೆಯರು ಸೇರಿದಂತೆ ಒಟ್ಟು 24 ಮತದಾರರಿದ್ದರು. ಎಲ್ಲ ಮತದಾರರು ಮತ ಚಲಾಯಿಸುವ ಮೂಲಕ ಈ ಮತಗಟ್ಟೆಯಲ್ಲಿ ಶೇ.100ರಷ್ಟು ಮತದಾನವಾಗಿದೆ.

ಇನ್ನು ಕಲಬುರಗಿ ತಾಲೂಕಿನ ಪಟ್ಟಣ ನಾಡ ಕಚೇರಿಯ ಮತಗಟ್ಟೆ ಸಂಖ್ಯೆ 69ರಲ್ಲಿ 42 ಪುರುಷರು ಹಾಗೂ 25 ಮಹಿಳೆಯರು ಸೇರಿದಂತೆ ಒಟ್ಟು 67 ಮತದಾರರಿದ್ದರು. ಈ ಪೈಕಿ 35 ಪುರುಷರು ಹಾಗೂ 16 ಮಹಿಳೆಯರು ಸೇರಿ ಒಟ್ಟು 51 ಮಂದಿ ಮತ ಚಲಾಯಿಸಿದ್ದು, ಶೇ.76.12ರಷ್ಟು ಮತದಾನವಾಗಿದೆ. ಇದು ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಮತದಾನ ದಾಖಲಾದ ಮತಗಟ್ಟೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor