ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆಯ ಮತ ಎಣಿಕೆ ಕಾರ್ಯ ನಾಳೆ (ಅ.27) ಬೆಳಿಗ್ಗೆ 8 ಗಂಟೆಯಿಂದ‌ ಗುಲ್ಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್‌ ಸಭಾಂಗಣದಲ್ಲಿ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತರಾದ ಝಹೀರಾ ನಸೀಮ್ ತಿಳಿಸಿದರು.

ಸೋಮವಾರ ಗುಲ್ಬರ್ಗಾ ವಿಶ್ವವಿದ್ಯಾಲಯದ ಗಣಿತ‌ ವಿಭಾಗದ ಭಾಸ್ಕರ್ ಸಭಾಂಗಣಕ್ಕೆ ಭೇಟಿ ನೀಡಿ ಮತ ಎಣಿಕೆಯ ಅಂತಿಮ ಸಿದ್ಧತೆ ಕುರಿತು ಪರಿಶೀಲಿಸಿದ‌ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ ಎಣಿಕೆಗೆ ಒಟ್ಟಾರೆ 14 ಟೇಬಲ್ ಹಾಕಲಾಗಿದೆ. ಪ್ರತಿಯೊಂದು ಟೇಬಲ್ ಗೆ ಓರ್ವ ಜಿಲ್ಲಾ ಮಟ್ಟದ ಅಧಿಕಾರಿ, ಇಬ್ಬರು ಸಹಾಯಕ ಅಧಿಕಾರಿಗಳು ಮತ ಎಣಿಕೆ ಮಾಡಲಿದ್ದಾರೆ. ಓರ್ವ ಗ್ರೂಪ್ 'ಡಿ' ಸಿಬ್ಬಂದಿ ಮತ ಪೆಟ್ಟಿಗೆ ತರಲು ನೆರವಾಗಲಿದ್ದಾರೆ. ಸ್ಪರ್ಧಾ ಕಣದಲ್ಲಿ 13 ಅಭ್ಯರ್ಥಿ ಇರುವುದರಿಂದ ಮತ ಎಣಿಕೆಗೆ ಪ್ರತಿ ಟೇಬಲ್‌ಗೆ 13 ಟ್ರೇಗಳನ್ನು ಮತ್ತು ತಿರಸ್ಕೃತ, ಸಂಶಯಾಸ್ಪದ ಮತಗಳಿಗೆ ಪ್ರತ್ಯೇಕ ಟ್ರೇ ಇಡಲಾಗುತ್ತದೆ ಎಂದರು.

ಬೆಳಿಗ್ಗೆ 8 ಗಂಟೆಗೆ‌ ಅಭ್ಯರ್ಥಿ ಅಥವಾ ಅವರ ಚುನಾವಣಾ ಏಜೆಂಟ್ ಹಾಗೂ ಚುನಾವಣಾ ವೀಕ್ಷಕರ ಸಮಕ್ಷಮದಲ್ಲಿ ಸ್ಟ್ರಾಂಗ್ ರೂಮ್ ತೆರೆದು ಎಣಿಕೆ ಆರಂಭಿಸಲಾಗುತ್ತದೆ. ಇನ್ನು ಮತ‌ ಎಣಿಕೆ ಅಧಿಕಾರಿ ಸಿಬ್ಬಂದಿಗಳಿಗೆ ಈಗಾಗಲೆ ಎರಡು ಹಂತದಲ್ಲಿ ತರಬೇತಿ ನೀಡಲಾಗಿದೆ ಎಂದ ಅವರು, ಮತ ಎಣಿಕೆ ದಿನದಂದು ಯಾವುದೇ ಕಾನೂನು ಸುವ್ಯವಸ್ಥೆ ಧಕ್ಕೆಯಾಗದಂತೆ ಅಗತ್ಯ ಪೊಲೀಸ್ ಭದ್ರತೆ ಒದಗಿಸಲಾಗಿದೆ‌ ಎಂದರು.

ಅಕ್ಟೋಬರ್ 23 ರಂದು ನಡೆದ ಮತದಾನದಲ್ಲಿ 34,784 ಮತದಾರರ ಪೈಕಿ 30,250 (ಶೇ.86.97) ದಾಖಲೆ ಪ್ರಮಾಣದಲ್ಲಿ ಮತದಾನವಾಗಿದೆ. ಕ್ಷೇತ್ರದ ವ್ಯಾಪ್ತಿಗೆ ಏಳು ಜಿಲ್ಲೆಗಳು ಬರಲಿದ್ದು, ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ‌ ಎಣಿಕೆಯಲ್ಲಿ ಭಾಗಿಯಾಗಲಿದ್ದು, ಪ್ರತಿ ಎರಡು ಟೇಬಲ್ ಗೆ ಎಣಿಕೆ ಉಸ್ತುವಾರಿ ಜಿಲ್ಲಾಧಿಕಾರಿಗಳು ನೋಡಿಕೊಳ್ಳಲಿದ್ದಾರೆ ಎಂದರು.

ಮತ ಎಣಿಕೆ ಕೇಂದ್ರಕ್ಕೆ ಅಭ್ಯರ್ಥಿ,‌ ಚುನಾವಣಾ ಏಜೆಂಟ್, ಕೌಂಟಿಂಗ್ ಸೇರಿದಂತೆ ಯಾರು ಮೊಬೈಲ್ ಫೋನ್, ಬೆಂಕಿ ಪೊಟ್ಟಣ, ಲೈಟರ್, ಫೌಂಟೇನ್ ಇಂಕ್ ಪೇನ್, ಸಿಗರೇಟ್, ಪಾನ, ಬೀಡಾ ತಂಬಾಕು, ನೀರಿನ ಬಾಟಲ್ ತರುವಂತಿಲ್ಲ. ಇವೆಲ್ಲವನ್ನು ನಿಷೇಧಿಸಲಾಗಿದೆ ಎಂದು ಝಹೀರಾ ನಸೀಮ್ ‌ತಿಳಿಸಿದರು.

ಗಣಿತ ವಿಭಾಗದ ಸಿಬ್ಬಂದಿಗೆ ರಜೆ:

ಗುಲ್ಬರ್ಗಾ ವಿಶ್ವವಿದ್ಯಾಲಯದ ಗಣಿತ‌ ವಿಭಾಗದ ಭಾಸ್ಕರ‌ ಸಭಾಂಗಣದಲ್ಲಿ ನಡೆಯಲಿದ್ದು, ಅಂದು ಗಣಿತ‌‌ ವಿಭಾಗದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಭದ್ರತಾ ಕೊಠಡಿಯ ಸಿಬ್ಬಂದಿಗಳಿಗೆ ರಜೆ ಘೋಷಿಸಲಾಗಿದೆ.

ಮತ‌ ಎಣಿಕೆ‌ ದಿನದಂದು ವಿಶ್ವವಿದ್ಯಾಲಯ ಆವರಣದಲ್ಲಿ ಖಾಸಗಿ ವಾಹನಗಳ ಪ್ರವೇಶವನ್ನು (ಅಭ್ಯರ್ಥಿ ಹಾಗೂ ಪತ್ರಕರ್ತರನ್ನು ಹೊರತುಪಡಿಸಿ) ವಾಹನಗಳನ್ನು ನಿಷೇಧಿಸಲಾಗಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor