ಮೋದಿ ಮನ್ ಕಿ ಬಾತ್ ನಲ್ಲಿ ಕಲಬುರಗಿ ತೊಗರಿಗೆ ಶ್ಲಾಘಿಸಿರುವುದು ರೈತರಿಗೆ ವರದಾನ: ಡಾ ಉಮೇಶ್ ಜಾಧವ್
ಕಲಬುರಗಿ : ಏಷ್ಯಾದ ತೊಗರಿಯ ಕಣಜ ಎಂದೇ ಖ್ಯಾತಿ ಪಡೆದ ಕಲಬುರಗಿಯ ತೊಗರಿಯ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಕಾಶವಾಣಿಯ ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಿ ರೈತರ ತೊಗರಿಗೆ ವಿಶ್ವಖ್ಯಾತಿಯನ್ನು ತಂದಿಕೊಟ್ಟಿದ್ದಾರೆ. ಇದು ರೈತರ ಪಾಲಿಗೆ ವರದಾನವಾಗಲಿದೆ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್ ತಿಳಿಸಿದ್ದಾರೆ
ಪ್ರಧಾನ ಮಂತ್ರಿ ಮೋದಿಯವರು ಅ.25ರಂದು ರವಿವಾರ ಆಕಾಶವಾಣಿಯ ಮಾಸಿಕ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಕಲ್ಯಾಣ ಕರ್ನಾಟಕದ ಹೆಮ್ಮೆಯ ತೊಗರಿ ಬೆಳೆಯ ಬಗ್ಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆತಿರುವುದನ್ನು ಪ್ರಸ್ತಾಪಿಸಿ ಪ್ರಸ್ತುತ ಕಲಬುರಗಿಯ ತೊಗರಿಯ ಬಗ್ಗೆ ವಿಶ್ವಾದ್ಯಂತ ಕುತೂಹಲ ಮೂಡಿಸಿದ್ದಾರೆ. ಕಲ್ಯಾಣ ಕರ್ನಾಟಕದ ತೊಗರಿಗೆ ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಲಿದೆ ಎಂದು ಹೇಳಿದರು.
ಈಗಾಗಲೇ ಕಲಬುರಗಿ ರೊಟ್ಟಿ ಬ್ರಾಂಡ್ ಎಲ್ಲೆಡೆ ಲಭ್ಯವಾಗುತ್ತಿತ್ತು. ಮಾಲ್ ಗಳಲ್ಲಿ ಕೂಡ ಸಿಗುತ್ತಿರುವುದು ಗ್ರಾಹಕರಿಗೆ ಸಂತೋಷವನ್ನುಂಟು ಮಾಡಿದೆ. ಕಲಬುರಗಿಯ ತೊಗರಿ ಮಾಲ್ಡೀವ್ಸ್‌ಗೆ ರಫ್ತಾಗುತ್ತಿದ್ದು ಮುಂದಿನ ದಿನಗಳಲ್ಲಿ ಇಂಗ್ಲೆಂಡ್ ಕೆನಡಾ ಆಸ್ಟ್ರೇಲಿಯಾ ಅಮೆರಿಕ ಮುಂತಾದ ರಾಷ್ಟ್ರಗಳಿಗೆ ರಫ್ತು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದ್ದು ಜಾಗತಿಕ ಮಾರುಕಟ್ಟೆ ವಿಸ್ತರಣೆಯಾಗುವ ಸಂಭವವಿದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ರೈತರಿಗೆ ಆದಾಯ ಹೆಚ್ಚಳ ಮಾಡುವ ಪ್ರಯತ್ನಕ್ಕೆ ಮೋದಿಯವರ ಭಾಷಣ ಪ್ರೇರಣೆ ನೀಡಲಿದೆ ಎಂದು ಡಾ. ಉಮೇಶ್ ಜಾಧವ್ ಹೇಳಿದರು.