ಸೇಡಂನಲ್ಲಿ ‘ಬೆಪ್ಪು ತಕ್ಕಡಿ ಬೋಳೇಶಂಕರ’ ನಾಟಕ ಪ್ರದರ್ಶನ
ಸೇಡಂ: ರಂಗನಯನ ಸಾಂಸ್ಕೃತಿಕ ಸಂಸ್ಥೆ (ರಿ.) ವತಿಯಿಂದ ಡಾ. ಚಂದ್ರಶೇಖರ ಕಂಬಾರ ಅವರ ರಚನೆಯ ‘ಬೆಪ್ಪು ತಕ್ಕಡಿ ಬೋಳೇಶಂಕರ’ ನಾಟಕವು ನವೆಂಬರ್ 25ರಂದು ಸೇಡಂ ತಾಲೂಕಿನ ಸರ್ಕಾರಿ ನೌಕರರ ಭವನದಲ್ಲಿ ಪ್ರದರ್ಶನಗೊಂಡಿತು.
ಕಾರ್ಯಕ್ರಮವನ್ನು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಾಬು ಮಿಯಾ ಉದ್ಘಾಟಿಸಿ ಮಾತನಾಡಿ, ಸಂಸ್ಕೃತಿ, ಜೀವನ ಮೌಲ್ಯಗಳು, ಸಾಹಿತ್ಯ, ನಾಟಕ ಹಾಗೂ ಕಲೆಯ ಪರಿಚಯವನ್ನು ಜನರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮಾಡಿಕೊಡುವಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ನಾಟಕ ಹಾಗೂ ಸಂಗೀತ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಸರ್ಕಾರಿ ನೌಕರರ ಭವನದ ಅಧ್ಯಕ್ಷ ಅರವಿಂದ್ ಪಸಾರ್, ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಶಿವಶರಣಪ್ಪ ಹಾಗೂ ಮಾತ್ರುಛಾಯ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಭೀಮಾಶಂಕರ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಗಣ್ಯರನ್ನು ಕಲಾವಿದರು ಶಾಲು ಹೊದಿಸಿ ಗೌರವಿಸಿದರು. ಬಳಿಕ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ರಂಗನಯನ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಅರವಿಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಂತರ ಕಲಾವಿದರು ‘ಬೆಪ್ಪು ತಕ್ಕಡಿ ಬೋಳೇಶಂಕರ’ ನಾಟಕವನ್ನು ಪ್ರದರ್ಶಿಸಿದರು. ಕಲಾವಿದರ ಅಭಿನಯ, ಸಂಭಾಷಣೆ ಹಾಗೂ ಪಾತ್ರಗಳ ನಿರ್ವಹಣೆ ಪ್ರೇಕ್ಷಕರ ಗಮನ ಸೆಳೆಯಿತು. ವಿದ್ಯಾರ್ಥಿಗಳು, ಮಕ್ಕಳು, ಕಲಾವಿದರು ಹಾಗೂ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಟಕವನ್ನು ವೀಕ್ಷಿಸಿದರು.