ಬೆಳೆ ರಕ್ಷಣೆಗೆ ಕೂಡಲೇ ಜಲಾಶಯಗಳ ನೀರು ಹರಿಸಿ: ಗೌತಮ್ ಪಾಟೀಲ್
ಚಿಂಚೋಳಿ: ಮಳೆಯ ಕೊರತೆ ಹಾಗೂ ತೀವ್ರ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ತಾಲೂಕಿನ ರೈತರ ಬೆಳೆಗಳನ್ನು ರಕ್ಷಿಸಲು ಚಂದ್ರಂಪಳ್ಳಿ, ನಾಗರಾಳ ಹಾಗೂ ಸ್ಥಳೀಯ ಸಣ್ಣ ನೀರಾವರಿ ಜಲಾಶಯಗಳಿಂದ ತಕ್ಷಣವೇ ನದಿ ಹಾಗೂ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಬೇಕು ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ್ ವೈಜನಾಥ ಪಾಟೀಲ್ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಧೋರಣೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮಳೆಯಿಲ್ಲದೆ ತೊಗರಿ, ಕಬ್ಬು, ಅರಿಶಿನ, ಬಾಳೆ ಹಾಗೂ ಇತರೆ ವಾಣಿಜ್ಯ ಬೆಳೆಗಳು ನೆಲ ಕಚ್ಚುತ್ತಿದ್ದು, ಸಂಪೂರ್ಣ ಒಣಗಿ ಹೋಗುವ ಹಂತ ತಲುಪಿವೆ. ರೈತರ ಶ್ರಮ ಮತ್ತು ಬಂಡವಾಳ ಉಳಿಸಲು ಜಲಾಶಯಗಳ ನೀರನ್ನು ಕೃಷಿ ಬಳಕೆಗೆ ಬಿಡುಗಡೆ ಮಾಡಬೇಕು. ರೈತರ ಪಂಪ್ಸೆಟ್ಗಳಿಗೆ ದಿನದ 8 ಗಂಟೆಗಳ ಕಾಲ ನಿರಂತರ ತ್ರಿಫೇಸ್ ವಿದ್ಯುತ್ ಪೂರೈಸಬೇಕು ಮತ್ತು ಲೋಡ್ ಶೆಡ್ಡಿಂಗ್ ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕು ಎಂದು ಹೇಳಿದರು.
ಬರದ ಪರಿಸ್ಥಿತಿ ತೀವ್ರಗೊಳ್ಳುವ ಮುನ್ನವೇ ಪ್ರತಿ ಗ್ರಾಮಕ್ಕೂ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಅಗತ್ಯ ವ್ಯವಸ್ಥೆ ಮಾಡಬೇಕು. ಸೀಮೆಂಟ್ ಫ್ಯಾಕ್ಟರಿಗಳಿಗೆ ಮಾತ್ರ ನೀರು ಹರಿಸಲಾಗುತ್ತಿದ್ದು, ತಾಲೂಕಿನ ರೈತರಿಗೆ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿಲ್ಲದೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗೋಪಾಲ್ ರಾವ ಕಟ್ಟಿಮನಿ, ಕೆ ಎಂ ಬಾರಿ, ಶ್ರೀಮಂತ ಕಟ್ಟಿಮನಿ, ಅಶೋಕ್ ಚವ್ಹಾಣ್, ಸಂತೋಷ್ ಗಡಂತಿ, ಚಿತಶೇಖರ ಪಾಟೀಲ್, ಪರ್ವತಕುಮಾರ ದೇಸಾಯಿ, ಶಿವಕುಮಾರ ಪೂಜಾರಿ, ಶಂಕರ ರಾಠೋಡ, ಗೋಪಾಲರೆಡ್ಡಿ, ಸತೀಶರೆಡ್ಡಿ ಇದ್ದರು.