ರಾಜ್ಯದ ಪರಿಸ್ಥಿತಿ ಅವಲೋಕಿಸಿ ಬರಗಾಲ ಪೀಡಿತ ಪ್ರದೇಶ ಘೋಷಣೆ : ಸಿಎಂ ಡಿ.ಕೆ.ಶಿವಕುಮಾರ್
ಕಲಬುರಗಿ: “ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲು ಕಾನೂನು ಚೌಕಟ್ಟಿದೆ. ರಾಜ್ಯದ ಎಲ್ಲಾ ಭಾಗಗಳ ಪರಿಸ್ಥಿತಿ ಪರಿಶೀಲಿಸಿ ನಂತರ ಘೋಷಣೆ ಮಾಡಲಾಗುವುದು” ಎಂದು ಸಿಎಂ ಡಿ.ಕೆ .ಶಿವಕುಮಾರ್ ಅವರು ಹೇಳಿದರು.
ಕಲಬುರಗಿ ಸರಕಾರಿ ಅತಿಥಿ ಗೃಹದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಉತ್ತರಿಸಿದರು.
ಬರಗಾಲಕ್ಕೆ ಸಿಲುಕಿರುವ ಕಲ್ಯಾಣ ಕರ್ನಾಟಕದ ಭಾಗಕ್ಕೆ ಸರಕಾರದ ಕೊಡುಗೆ ಏನು ಎಂದು ಕೇಳಿದಾಗ, “ನಾನು ಬರಗಾಲ ಪರಿಸ್ಥಿತಿ ಅವಲೋಕಿಸಲು ಕಲ್ಯಾಣ ಕರ್ನಾಟಕ ಭಾಗಕ್ಕೆ ಬಂದಿದ್ದೇನೆ. ಇಲ್ಲಿನ ಜನರು ಮತ್ತು ಜನಪ್ರತಿನಿಧಿಗಳನ್ನು ಭೇಟಿ ಮಾಡಿದ್ದೇನೆ. ಇಲ್ಲಿನ ಪರಿಸ್ಥಿತಿಯ ಅವಲೋಕನಕ್ಕೆ ಸಭೆ ನಡೆಸುತ್ತಿದ್ದೇನೆ. ಅದೇ ರೀತಿ ಎರಡು ಮೂರು ದಿನ ಬಿಟ್ಟು ಬೆಳಗಾವಿಗೂ ಭೇಟಿ ನೀಡುತ್ತಿದ್ದೇನೆ” ಎಂದರು.
“ಸಮಸ್ಯೆ ಬಗೆಹರಿಸಬೇಕು ಎಂದು ಜನರು ಬೇಡಿಕೆಗಳನ್ನು ಮಂಡಿಸಿದ್ದಾರೆ. ಅವರ ಸಮಸ್ಯೆ ಆಲಿಸಲು ಹೊಸದಾಗಿ ಪ್ರಜಾಸೇವಾ ಇಲಾಖೆ ಸ್ಥಾಪಿಸಿ, ಸಚಿವರನ್ನು ನೇಮಕ ಮಾಡಿ, ಜನರ ಅರ್ಜಿಗಳನ್ನು ಪರಿಶೀಲಿಸಿ ಅವರಿಗೆ ಸಾಧ್ಯವಾದಷ್ಟು ನ್ಯಾಯ ಒದಗಿಸುವ ಕೆಲಸವನ್ನು ಸರಕಾರ ಮಾಡುತ್ತದೆ” ಎಂದರು.