ಸೇಡಂನಲ್ಲಿ ಬಿರುಗಾಳಿ–ಮಳೆ ಅಬ್ಬರ : ಉರುಳಿಬಿದ್ದ ಮರ
ಸೇಡಂ: ನಗರದಲ್ಲಿ ಸೋಮವಾರ ಸಂಜೆ ಸುರಿದ ಧಾರಾಕಾರ ಗಾಳಿ–ಮಳೆಯಿಂದ ಹಲವು ಕಡೆ ಅವಾಂತರಗಳು ಸಂಭವಿಸಿದ್ದು, ಬಸ್ ನಿಲ್ದಾಣದ ಸಮೀಪದ ಪೊಲೀಸ್ ಕ್ವಾರ್ಟರ್ಸ್ ಮನೆಯ ಮೇಲೆ ನೀಲಗಿರಿ ಮರ ಉರುಳಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬಲವಾದ ಗಾಳಿ ಮತ್ತು ಮಳೆಯ ಹೊಡೆತಕ್ಕೆ ಭಾರೀ ಗಾತ್ರದ ನೀಲಗಿರಿ ಮರ ಹಾಗೂ ಸಮೀಪದ ವಿದ್ಯುತ್ ಕಂಬ ನೆಲಕ್ಕುರುಳಿದ್ದು, ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಕುಟುಂಬಸ್ಥರು ಕ್ಷಣಕಾಲ ಆತಂಕಕ್ಕೊಳಗಾದರು. ಸ್ಥಳಕ್ಕೆ ಪಿಎಸ್ಐ ಉಪೇಂದ್ರ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮರಗಳು ರಸ್ತೆಗೆ ಬಿದ್ದ ಪರಿಣಾಮ ಬಸ್ ನಿಲ್ದಾಣದ ಪ್ರಮುಖ ರಸ್ತೆ ಹಾಗೂ ಮಾರುಕಟ್ಟೆ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ನಗರಸಭೆ ಸಿಬ್ಬಂದಿ ಮತ್ತು ಅಧಿಕಾರಿಗಳು ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಕೆಲ ದಿನಗಳಿಂದ ತೀವ್ರ ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ಸೇಡಂ ನಗರದಲ್ಲಿ ಮಳೆ, ಸಿಡಿಲು ಹಾಗೂ ಬಿರುಗಾಳಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಇದೇ ವೇಳೆ ಮುಧೋಳ ವ್ಯಾಪ್ತಿಯ ಗ್ರಾಮಗಳು ಮತ್ತು ತಾಂಡಗಳಲ್ಲಿ ಕಳೆದ ಮೂರು–ನಾಲ್ಕು ದಿನಗಳಿಂದ ಬೀಸಿದ ಬಿರುಗಾಳಿ ಹಾಗೂ ಸಿಡಿಲಿನ ಪರಿಣಾಮವಾಗಿ ಮೂವರು ಮೃತಪಟ್ಟಿದ್ದು, ಮೇಕೆಗಳು ಮತ್ತು ಎತ್ತುಗಳು ಸಾವನ್ನಪ್ಪಿರುವ ಘಟನೆಗಳೂ ವರದಿಯಾಗಿವೆ.
ಮಳೆ–ಗಾಳಿಗೆ ಸಂಬಂಧಿಸಿದ ಅವಘಡಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗಿದೆ. ಅಪಾಯ ಸಂಭವಿಸಬಹುದಾದ ಸ್ಥಳಗಳಿಗೆ ನಿರಂತರವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ.
-ಶ್ರೇಯಾಂಕ ಧನಶ್ರೀ (ಸೇಡಂ ತಹಶೀಲ್ದಾರ್)