ಕಲಬುರಗಿಯಲ್ಲಿ ಜವಳಿ ಪಾರ್ಕ್ ಯೋಜನೆ | 1,700 ಕೋಟಿ ರೂ. ಹೂಡಿಕೆಗೆ ಹೂಡಿಕೆದಾರರಿಂದ ಪ್ರಸ್ತಾಪ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಉದ್ದೇಶಿತ ಮೆಗಾ ಜವಳಿ ಪಾರ್ಕ್ (Textile Park) ಯೋಜನೆ ವೇಗವಾಗಿ ಪ್ರಗತಿ ಕಾಣುತ್ತಿದ್ದು, ಜಿಲ್ಲೆಯ ನದಿಸಿನ್ನೂರು ಮತ್ತು ಕಿರಣಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಒಟ್ಟು 1,000 ಎಕರೆ ಜಮೀನನ್ನು ಯೋಜನೆಗಾಗಿ ಗುರುತಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ನಡೆದ ಸಭೆಯಲ್ಲಿ ಜವಳಿ ಇಲಾಖೆ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಅಧಿಕಾರಿಗಳು, ಹೂಡಿಕೆದಾರರು ಹಾಗೂ ವಿಡಿಯೊ ಸಂವಾದದ ಮೂಲಕ ಕಲಬುರಗಿ ಜಿಲ್ಲಾಧಿಕಾರಿಗಳೊಂದಿಗೆ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಪಾರ್ಕ್ ಉದ್ಘಾಟನೆಗೂ ಮುನ್ನವೇ 8 ಪ್ರಮುಖ ಹೂಡಿಕೆದಾರರಿಂದ ಸುಮಾರು 1,700 ಕೋಟಿ ರೂ. ಹೂಡಿಕೆ ಪ್ರಸ್ತಾಪಗಳು ಬಂದಿವೆ ಎಂದು ಸಚಿವರು ಮಾಹಿತಿ ನೀಡಿದರು.
ಜವಳಿ ಪಾರ್ಕ್‌ನಲ್ಲಿ ಸ್ಥಾಪನೆಯಾಗಲಿರುವ ಕೈಗಾರಿಕೆಗಳಿಗೆ ಅನುಕೂಲವಾಗುವಂತೆ 25 ಎಕರೆಯಲ್ಲಿ ಸೌರವಿದ್ಯುತ್ ಘಟಕ ಆರಂಭಿಸಲು ಯೋಜಿಸಲಾಗಿದೆ. ಇದರಿಂದ ಹಸಿರುಶಕ್ತಿಯ ಬಳಕೆ ಹೆಚ್ಚಾಗಿ ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದರು.
ಯೋಜನೆಗಾಗಿ ಗುರುತಿಸಲಾದ ಭೂಮಿಯನ್ನು ಈಗಾಗಲೇ ಕೈಗಾರಿಕಾ ಬಳಕೆಗೆ ಪರಿವರ್ತಿಸಲಾಗಿದ್ದು, ಅರಣ್ಯ ಇಲಾಖೆಯ ಅಗತ್ಯ ಅನುಮತಿಗಳನ್ನೂ ಪಡೆಯಲಾಗಿದೆ. ಜೊತೆಗೆ ಪರಿಸರ ಅನುಮತಿ (Environmental Clearance) ಕೂಡ 2025ರ ಅಕ್ಟೋಬರ್ 27ರಂದು ಲಭ್ಯವಾಗಿದೆ ಎಂದು ತಿಳಿಸಿದರು.
ಪಾರ್ಕ್‌ನ ಮಾಸ್ಟರ್ ಪ್ಲಾನ್, ಆರ್ಥಿಕ ಯೋಜನೆ ಹಾಗೂ ವಿವರವಾದ ಯೋಜನಾ ವರದಿ (DPR) ಸಿದ್ಧಗೊಂಡಿದ್ದು, ಯೋಜನೆಯ ನಿರ್ವಹಣೆಗೆ ಸಂಬಂಧಿಸಿದಂತೆ ಈಗಾಗಲೇ ಮೂರು ಪ್ರಮುಖ ಮಂಡಳಿ ಸಭೆಗಳು ನಡೆದಿವೆ ಎಂದು ಸಚಿವರು ಹೇಳಿದರು.
ಈ ಮೆಗಾ ಜವಳಿ ಪಾರ್ಕ್ ಸ್ಥಾಪನೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಹೊಸ ಉತ್ತೇಜನ ಸಿಗಲಿದೆ ಎಂದು ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.
ಜವಳಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ, ಕಲಬುರಗಿ ಜಿಲ್ಲಾಧಿಕಾರಿ ಮೊಹಮ್ಮದ್ ಇಕ್ರಮುಲ್ಲಾ ಷರೀಷ್ ಹಾಗೂ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.