ವಾಡಿ: ಸಮೀಪದ ಹಲಕಟ್ಟಿಯಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನವೆಂಬರ್ 24ರಿಂದ ಆರಂಭವಾಗಲಿದೆ ಎಂದು ಅಭಿನವ ಮುನೀಂದ್ರ ಶಿವಾಚಾರ್ಯರು ತಿಳಿಸಿದರು.

ಈ ಕುರಿತು ಗುರುವಾರ ಶ್ರೀಮಠದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಭದ್ರೇಶ್ವರ ಜಾತ್ರೆಗೆ ಐತಿಹಾಸಿಕ ಹಿನ್ನೆಲೆಯಿದೆ. ಜಾತ್ರೆಯ ಎಲ್ಲ ಕಾರ್ಯಕ್ರಮಗಳು ಸಂಜೆ ಮತ್ತು ರಾತ್ರಿ ನಡೆಯುವುದು ವಿಶೇಷವಾಗಿದೆ. ಪ್ರತಿಯೊಂದು ಧಾರ್ಮಿಕ ವಿಧಿವಿಧಾನವೂ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಹೀಗಾಗಿ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ ಎಂದರು.

ಜಾತ್ರಾ ಕಾರ್ಯಕ್ರಮಗಳ ವಿವರ: ನವೆಂಬರ್ 24ರಂದು ಮಂಗಳವಾರ ರಾತ್ರಿ 10 ಗಂಟೆಗೆ ಚಿಕ್ಕವೀರಪ್ಪನವರ ಮನೆಯಿಂದ ಮೈಲಾರಲಿಂಗನ ದೇವಸ್ಥಾನಕ್ಕೆ ಸಕಲ ವಾದ್ಯಗಳೊಂದಿಗೆ ಅಂಬಲಿ ಬಂಡಿ ಆಗಮಿಸಲಿದೆ.

ನವೆಂಬರ್ 25ರಂದು ಬುಧವಾರ ಸಂಜೆ 4 ಗಂಟೆಗೆ ಜೋಡು ಪಲ್ಲಕ್ಕಿ ಉತ್ಸವದೊಂದಿಗೆ ರುದ್ರ ಬಸವಣ್ಣನವರ ದೇವಸ್ಥಾನಕ್ಕೆ ತೆರಳಲಾಗುವುದು. ಸಂಜೆ 6 ಗಂಟೆಗೆ ಚೌಡಮ್ಮನ ಗಂಗಸ್ಥಳ ಕಾರ್ಯಕ್ರಮ ನಡೆಯಲಿದೆ.

ನವೆಂಬರ್ 26ರಂದು ಗುರುವಾರ ರಾತ್ರಿ 11 ಗಂಟೆಗೆ ಪಲ್ಲಕ್ಕಿ ಸೇವೆ ಹಾಗೂ ಸಕಲ ವಾದ್ಯವೃಂದಗಳೊಂದಿಗೆ ಶೆಟ್ಟಿಯವರ ಮನೆಗೆ ಆಗಮನವಾಗಲಿದೆ. ನವೆಂಬರ್ 27ರಂದು ಶುಕ್ರವಾರ ರಾತ್ರಿ 1 ಗಂಟೆಗೆ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಒಗ್ಗಯ್ಯಗಳಿಂದ ಕಳ್ಳಸರಪಳಿ ಹರಿಯುವ ಕಾರ್ಯಕ್ರಮ ನಡೆಯಲಿದೆ.

ನವೆಂಬರ್ 28ರಂದು ಶನಿವಾರ ಸಂಜೆ 4 ಗಂಟೆಗೆ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ದೈವದ ಸರಪಳಿ ಹಾಗೂ ಒಗ್ಗಯ್ಯಾಗಳಿಗೆ ಸನ್ಮಾನ ಮಾಡಲಾಗುವುದು. ರಾತ್ರಿ 11 ಗಂಟೆಗೆ ಅಗ್ನಿಪ್ರವೇಶ ನಡೆಯಲಿದ್ದು, ಪುರವಂತರು ಹಾಗೂ ಭಕ್ತಸಮೂಹದಿಂದ ಪುರವಂತರ ಸೇವೆ ನೆರವೇರಲಿದೆ.

ನವೆಂಬರ್ 29ರಂದು ಭಾನುವಾರ ಸಂಜೆ 4 ಗಂಟೆಗೆ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಚೌಡೇಶ್ವರಿಯ ಅಡುವಿಕೆ ಹಾಗೂ ಉಡಿ ತುಂಬಿ ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ಶ್ರೀ ವೀರಭದ್ರೇಶ್ವರ ಭವ್ಯ ರಥೋತ್ಸವ ಜರುಗಲಿದೆ. ಭಕ್ತರಾದ ಹಲಕಟ್ಟಿಯ ಈರಣ್ಣ ಕೋಲಕುಂದಿ ಅವರ ನಿವಾಸದಿಂದ ದೇವಸ್ಥಾನಕ್ಕೆ ಕುಂಭ ಬರಲಿದೆ. ವಿಜಯಪುರದ ಶ್ರೀಶಂಕರ ಮಹಾದೇವಪ್ಪ ಮತ್ತು ವೀರೇಶ ಮಹಾದೇವಪ್ಪ ಹಳಕಟ್ಟಿ ಅವರಿಂದ ರಾತ್ರಿ 9 ಗಂಟೆಗೆ ವಿಶೇಷ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀಗಳು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಅರ್ಚಕ ಮಲ್ಲಿಕಾರ್ಜುನ ಪೂಜಾರಿ, ಮುಖಂಡರಾದ ರವೀಂದ್ರಕುಮಾರ ಸಂಗಶೆಟ್ಟಿ, ಸುಗಣ್ಣ ಚಂದನಕೇರಿ, ರಾಜುಗೌಡ ಪೊಲೀಸ್ ಪಾಟೀಲ, ಮಲ್ಲಿಕಾರ್ಜುನ ಕಟ್ಟಿಮನಿ, ಸುಭಾಷ್ ಸಾಹು ಚಂದನಕೇರಿ, ಹೇಮಂತ ವಾಕಡೆ, ಪ್ರಕಾಶ ಚಂದನಕೇರಿ, ಬಸವರಾಜಗೌಡ ಪೊಲೀಸ್ ಪಾಟೀಲ, ಗುರುನಾಥ ಮಣಿಗಿರಿ, ಸಿದ್ದಯ್ಯ ಶಾಸ್ತ್ರೀ ನಂದೂರಮಠ, ರಾಘವೇಂದ್ರ ಅಲ್ಲಿಪುರಕರ್, ಈರಣ್ಣ ಇಸಬಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಾಜಿದ್‌ ಅಲಿ/ವಾರ್ತಾಭಾರತಿ

ಕಲಬುರಗಿ ಜಿಲ್ಲಾ ವರದಿಗಾರರು

ಸಾಜಿದ್ ಅಲಿ ಅವರು 12 ವರ್ಷಗಳ ಪತ್ರಿಕೋದ್ಯಮ ಅನುಭವ ಹೊಂದಿದ್ದಾರೆ. ವಾರ್ತಾಭಾರತಿ ಮಂಗಳೂರು ಡೆಸ್ಕ್ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿರುವ ಇವರು, ಕಳೆದ ಏಳು ವರ್ಷಗಳಿಂದ ವಾರ್ತಾಭಾರತಿ ಡಿಜಿಟಲ್ ವೆಬ್‌ಸೈಟ್‌ನ ಕಲಬುರಗಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಕೋಆರ್ಡಿನೇಟರ್ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ