ಒಂದು ವಾರದೊಳಗೆ ಹೊಸ ಎಂಡೋಸಲ್ಫಾನ್ ಸೆಲ್ ರಚಿಸಲಾಗುವುದು: ಮುಖ್ಯಮಂತ್ರಿ ವಿ.ಡಿ. ಸತೀಶನ್
ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಹೊಸ ಎಂಡೋಸಲ್ಫಾನ್ ಸೆಲ್ ಅನ್ನು ಒಂದು ವಾರದೊಳಗೆ ರಚಿಸಲಾಗುವುದು. ಈ ಸೆಲ್ ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಸಂತ್ರಸ್ತರ ಸಮಸ್ಯೆಗಳನ್ನು ಪರಿಶೀಲಿಸಲಿದೆ ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ತಿಳಿಸಿದರು.
ಕಾಸರಗೋಡು ಅತಿಥಿಗೃಹದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರು ಹಾಗೂ ಅವರ ಕುಟುಂಬದವರೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
2024ರಲ್ಲಿ ನಡೆದ ವೈದ್ಯಕೀಯ ಶಿಬಿರದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರನ್ನು ಗುರುತಿಸಲು ಅನುಸರಿಸಿದ ಮಾನ ದಂಡಗಳನ್ನು ಮರುಪರಿಶೀಲಿಸಲಾಗುವುದು. ಆ ಶಿಬಿರದಲ್ಲಿ ಸಂತ್ರಸ್ತರೆಂದು ಗುರುತಿಸಲ್ಪಟ್ಟವರನ್ನು ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಗೆ ಸೇರಿಸಲಾಗುವುದು. ವೈದ್ಯಕೀಯ ಶಿಬಿರಕ್ಕೆ ಸಂಬಂಧಿಸಿದಂತೆ ಹೋರಾಟ ಸಮಿತಿ ಸಲ್ಲಿಸಿರುವ ದೂರುಗಳನ್ನು ಪರಿಗಣಿಸಿ ಮುಂದಿನ ವೈದ್ಯಕೀಯ ಶಿಬಿರ ನಡೆಸಲಾಗುವುದು. ಇದಕ್ಕಾಗಿ ವೈದ್ಯಕೀಯ ಕಾಲೇಜುಗಳ ತಜ್ಞರು ಮಾನದಂಡಗಳನ್ನು ಸಿದ್ಧಪಡಿಸಲಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಸಂತ್ರಸ್ತರಿಗೆ ಔಷಧ ವಿತರಿಸಲು ಹಣಕಾಸಿನ ಕೊರತೆ ಅಡ್ಡಿಯಾಗುವುದಿಲ್ಲ. ಬಾಕಿ ಇರುವ ಎಲ್ಲ ಮೊತ್ತವನ್ನು ಪಾವತಿಸಿ ಔಷಧ ವಿತರಣೆಯನ್ನು ಸುಗಮಗೊಳಿಸಲಾಗುವುದು ಎಂದರು.
ಸಂತ್ರಸ್ತರಿಗೆ ಉಚಿತ ವೈದ್ಯಕೀಯ ನೆರವು ಒದಗಿಸಲು ಕಾಸರಗೋಡು ಜಿಲ್ಲೆಯಲ್ಲಿರುವ ಹಾಗೂ ಸಮೀಪದ ಜಿಲ್ಲೆಗಳ ಆಸ್ಪತ್ರೆಗಳನ್ನು ಬಲಪಡಿಸಲಾಗುವುದು. ಕಾಸರಗೋಡು ವೈದ್ಯಕೀಯ ಕಾಲೇಜಿನಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ವಿಶೇಷ ಚಿಕಿತ್ಸಾ ವಿಭಾಗ ಆರಂಭಿಸಲಾಗುವುದು. ಈ ಸಂಬಂಧ ಆಸ್ಪತ್ರೆಯ ಕಾರ್ಯವೈಖರಿ ಮತ್ತು ಅಗತ್ಯ ಸೌಲಭ್ಯಗಳ ಕುರಿತು ವೈದ್ಯಕೀಯ ತಜ್ಞರ ತಂಡ ಒಂದು ತಿಂಗಳೊಳಗೆ ಅಧ್ಯಯನ ನಡೆಸಲಿದೆ. ಅಗತ್ಯ ಸೌಲಭ್ಯ ಹಾಗೂ ಹುದ್ದೆಗಳನ್ನು ಸೃಷ್ಟಿಸಿ ಅಥವಾ ಇತರ ಜಿಲ್ಲೆಗಳಿಂದ ವೈದ್ಯರು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ವಿಭಾಗದ ಕಾರ್ಯಾಚರಣೆ ಆರಂಭಿಸಲಾಗುವುದು. ಬಳಿಕ ಜಿಲ್ಲಾ ಆಸ್ಪತ್ರೆ ಸೇರಿದಂತೆ ಇತರ ಆಸ್ಪತ್ರೆಗಳಲ್ಲಿಯೂ ಇದೇ ರೀತಿಯ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕಾಸರಗೋಡು ವೈದ್ಯಕೀಯ ಕಾಲೇಜಿನಲ್ಲಿ ವಿಶೇಷ ಚಿಕಿತ್ಸಾ ವ್ಯವಸ್ಥೆ ಸಿದ್ಧವಾಗುವವರೆಗೆ ಮಂಗಳೂರಿನ ನಾಲ್ಕು ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗುವುದು. ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಈಗಾಗಲೇ ನೀಡಲಾಗುತ್ತಿರುವ ಸೇವೆಗಳನ್ನು ಮತ್ತಷ್ಟು ಬಲಪಡಿಸಲಾಗುವುದು. ಜಿಲ್ಲೆಯ ತಾಲ್ಲೂಕು ಆಸ್ಪತ್ರೆಗಳಲ್ಲಿನ ವೈದ್ಯರ ಕೊರತೆಯನ್ನೂ ವಿಶೇಷವಾಗಿ ಪರಿಗಣಿಸಿ ನೀಗಿಸಲಾಗುವುದು ಎಂದರು.
ಎಂಡೋಸಲ್ಫಾನ್ ಸಂತ್ರಸ್ತರಿಗೆ ನೀಡಲಾಗುತ್ತಿದ್ದ ಸಾಂತ್ವನ ಸಹಾಯಧನವನ್ನು 2,200 ರೂ. ರಿಂದ 1,700 ರೂ. ಇಳಿಸಿರುವ ವಿಚಾರವನ್ನು ಪರಿಶೀಲಿಸಲಾಗುವುದು. ಕಡಿತಗೊಳಿಸಿರುವ ಮೊತ್ತವನ್ನು ಮುಂದಿನ ಬಜೆಟ್ನೊಳಗೆ ಮರುಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಸಂತ್ರಸ್ತರಿಗೆ ವೈಜ್ಞಾನಿಕ ರೀತಿಯಲ್ಲಿ ಪುನರ್ವಸತಿ ಕಲ್ಪಿಸಲು ವಿಶೇಷ ಪ್ಯಾಕೇಜ್ ರೂಪಿಸಲಾಗುವುದು. ಈ ಕ್ಷೇತ್ರ ದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗುತ್ತದೆ. ಪ್ಯಾಕೇಜ್ನಡಿ ಅಂಗವೈಕಲ್ಯ ಹೊಂದಿರುವ ಮಕ್ಕಳಿಗೆ ಅಗತ್ಯವಾದ ಚಿಕಿತ್ಸೆಗಳು ಮತ್ತು ಥೆರಪಿಗಳನ್ನು ಉಚಿತವಾಗಿ ಒದಗಿಸಲಾಗುವುದು. ಈ ಸಮಿತಿಯೊಂದಿಗೆ ಹೋರಾಟ ಸಮಿತಿ ಸದಸ್ಯರು ಹಾಗೂ ಮಕ್ಕಳ ಪೋಷಕರು ಚರ್ಚಿಸಿ ತಮ್ಮ ಸಲಹೆ ಮತ್ತು ಆತಂಕಗಳನ್ನು ಹಂಚಿಕೊಳ್ಳಬಹುದು.
ಸಂತ್ರಸ್ತ ಮಕ್ಕಳನ್ನು ಆರೈಕೆ ಮಾಡುವ ತಾಯಂದಿರನ್ನೂ ಈ ಪ್ಯಾಕೇಜ್ನಲ್ಲಿ ಸೇರಿಸಲಾಗುವುದು. ಅವರ ಜೀವನೋಪಾಯಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಜಿಲ್ಲೆಯಲ್ಲಿರುವ ಬಡ್ಸ್ ಶಾಲೆಗಳ ಸ್ಥಿತಿಗತಿ ಯನ್ನು ಪರಿಶೀಲಿಸಿ, ಅಗತ್ಯ ಬದಲಾವಣೆಗಳೊಂದಿಗೆ ಅವುಗಳನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಹೇಳಿದರು.
ಸಾಲದ ಸುಳಿಗೆ ಸಿಲುಕಿರುವ ಎಂಡೋಸಲ್ಫಾನ್ ಸಂತ್ರಸ್ತ ಮಕ್ಕಳ ಪೋಷಕರ ವಿವರಗಳನ್ನು ಎಂಡೋಸಲ್ಫಾನ್ ಸೆಲ್ ಮೂಲಕ ಸಂಗ್ರಹಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಸೂಚಿಸಿದರು. ಸಂತ್ರಸ್ತರಿಗೆ ಉಚಿತ ಪಡಿತರ ವಿತರಣೆ ಹಾಗೂ ಬಡ್ಸ್ ಶಾಲೆಗಳಲ್ಲಿನ ಸಮಸ್ಯೆಗಳನ್ನು ಸೆಲ್ ಸಭೆಯಲ್ಲಿ ಪರಿಶೀಲಿಸಲಾಗುವುದು. ಒಂದೇ ಕುಟುಂಬದಲ್ಲಿ ಒಂದೇ ಕಾಯಿಲೆಯಿಂದ ಬಳಲುತ್ತಿರುವ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಸಂತ್ರಸ್ತರ ಪಟ್ಟಿಗೆ ಸೇರಿಸಿರುವ ವಿಚಾರವನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
2011ರ ಬಳಿಕ ಜನಿಸಿದವರನ್ನು ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಗೆ ಸೇರಿಸದಿರುವ ಕುರಿತು ಇರುವ ಸರ್ಕಾರಿ ಆದೇಶವನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸಂತ್ರಸ್ತ ಪ್ರದೇಶಗಳೆಂದು ಗುರುತಿಸಲಾದ ಪಂಚಾಯಿತಿಗಳ ಕುರಿತ ಸಮಸ್ಯೆಗಳನ್ನೂ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಎಂಡೋಸಲ್ಫಾನ್ ಸಂತ್ರಸ್ತರ ಶೇ.60ರಷ್ಟು ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು. ವಿಶೇಷ ಪ್ಯಾಕೇಜ್ ಜಾರಿಯಾದ ಬಳಿಕ ಉಳಿದ ಸಮಸ್ಯೆಗಳಿಗೂ ಪರಿಹಾರ ದೊರೆಯಲಿದೆ. ಸಂತ್ರಸ್ತರಿಗೆ ಜೀವಿತಾವಧಿ ಯವರೆಗೆ ಉಚಿತ ಚಿಕಿತ್ಸೆ ನೀಡುವ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಜಿಲ್ಲೆಯ ಉಸ್ತುವಾರಿ ಹಾಗೂ ರಾಜ್ಯ ಸ್ಥಳೀಯಾಡಳಿತ ಸಚಿವ ಕೆ.ಎಂ. ಶಾಜಿ ಪ್ರತಿ ತಿಂಗಳು ಜಿಲ್ಲೆಯ ಸಾಮಾನ್ಯ ಸಮಸ್ಯೆಗಳನ್ನು ಪರಿಶೀಲಿಸುವುದರ ಜೊತೆಗೆ, ಪ್ರತಿ ಮೂರು ತಿಂಗಳಿಗೊಮ್ಮೆ ಎಂಡೋಸಲ್ಫಾನ್ ಸಂತ್ರಸ್ತರ ಸಮಸ್ಯೆಗಳ ಕುರಿತು ಪ್ರತ್ಯೇಕವಾಗಿ ಸಭೆ ನಡೆಸಿ ಪರಿಶೀಲಿಸಲಿದ್ದಾರೆ.
ಮೂರು ತಿಂಗಳಿಗೊಮ್ಮೆ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಹೋರಾಟ ಸಮಿತಿ ಸದಸ್ಯರು ಹಾಗೂ ಸಂತ್ರಸ್ತರ ಪೋಷಕರು ಯಾವುದೇ ಸಮಯದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ತಿಳಿಸಬಹುದು.
ರಾಜ್ಯ ಸರಕಾರ ಸಮನ್ವಯದೊಂದಿಗೆ ತಂಡವಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಸಚಿವ ಕೆ.ಎಂ. ಶಾಜಿ, ಸಂಸದ ರಾಜ್ಮೋಹನ್ ಉಣ್ಣಿತ್ತಾನ್, ಶಾಸಕರಾದ ಕಲ್ಲಟ್ರ ಮಾಹಿನ್, ಎ.ಕೆ.ಎಂ. ಅಶ್ರಫ್, ಕೆ. ನೀಲಕಂಠನ್, ಜಿಲ್ಲಾ ಪಂಚಾಯ ತ್ ಅಧ್ಯಕ್ಷ ಸಾಬು ಅಬ್ರಹಾಂ, ಜಿಲ್ಲಾಧಿಕಾರಿ ಶ್ರೀಧನ್ಯ ಸುರೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ನಿತಿನ್ ರಾಜ್ ಹಾಗೂ ಎಂಡೋಸಲ್ಫಾನ್ ಸೆಲ್ ಉಪ ಜಿಲ್ಲಾಧಿಕಾರಿ ರಾಂ ರಾಜ್ ಉಪಸ್ಥಿತರಿದ್ದರು.