Keralam | ಕಾಸರಗೋಡು ಸಹಿತ ಐದು ಜಿಲ್ಲೆಗಳಲ್ಲಿ ಈ.ಡಿ. ದಾಳಿ: 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲನೆ
ಕಾಸರಗೋಡು, ನ.20: ಚಿನ್ನ ಕಳ್ಳ ಸಾಗಣೆ ಮತ್ತು ಅಕ್ರಮ ಹವಾಲಾ ಹಣಕಾಸು ವಹಿವಾಟು ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಈ.ಡಿ.) ಅಧಿಕಾರಿಗಳು ಇಂದು ಮುಂಜಾನೆ ಕಾಸರಗೋಡು ಸೇರಿದಂತೆ ಕೇರಳದ ಐದು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್, ಮಲಪ್ಪುರಂ ಮತ್ತು ಪಾಲಕ್ಕಾಡ್ ಜಿಲ್ಲೆಗಳ ಸುಮಾರು ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಈ.ಡಿ. ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ.
ಕಾಸರಗೋಡಿನ ತಳಂಗರೆ ಹಾಗೂ ಚೆಂಬರಿಕದ ಇಬ್ಬರು ಉದ್ಯಮಿಗಳ ಮನೆಗಳಿಗೂ ದಾಳಿ ನಡೆಸಲಾಗಿದ್ದು, ತಪಾಸಣೆ ಮುಂದುವರಿದಿದೆ.
ಚಿನ್ನ ಕಳ್ಳಸಾಗಣೆ, ಅಕ್ರಮ ಹವಾಲಾ ಹಣ ವರ್ಗಾವಣೆ ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ( ಫೆಮಾ) ಉಲ್ಲಂಘನೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ ಎ ) ಅಡಿಯಲ್ಲಿ ಈ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಈ.ಡಿ.ಯ ಕೊಚ್ಚಿ ಘಟಕದ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಅಕ್ರಮ ಹಣಕಾಸು ವಹಿವಾಟಿಗೆ ಸಂಬಂಧಿಸಿದ ದಾಖಲೆಗಳು, ಹಣಕಾಸಿನ ವ್ಯವಹಾರಗಳ ವಿವರಗಳು ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಶೋಧ ಕಾರ್ಯ ಮುಂದುವರಿದಿದ್ದು, ದಾಳಿ ಪೂರ್ಣಗೊಂಡ ಬಳಿಕ ವಶಪಡಿಸಿಕೊಂಡ ದಾಖಲೆಗಳು ಮತ್ತು ಇತರ ವಿವರಗಳ ಕುರಿತು ಈ.ಡಿ. ಅಧಿಕೃತ ಮಾಹಿತಿ ನೀಡುವ ನಿರೀಕ್ಷೆಯಿದೆ. ಬಂಧನ ಅಥವಾ ವಶಪಡಿಸಿಕೊಂಡ ಹಣದ ಕುರಿತು ಸದ್ಯಕ್ಕೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.