ಕಾಸರಗೋಡು | ನಕಲಿ ಚಿನ್ನಾಭರಣ ಅಡವಿಟ್ಟು ಸೊಸೈಟಿಗೆ ಲಕ್ಷಾಂತರ ರೂ. ವಂಚನೆ: ಆರೋಪಿಯ ಬಂಧನ
ಕಾಸರಗೋಡು: ನಕಲಿ ಚಿನ್ನದ ಆಭರಣಗಳನ್ನು ಅಡವಿಟ್ಟು 4.40 ಲಕ್ಷ ರೂ. ಸಾಲ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ನನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.
ಚಂದ್ರಗಿರಿ ಕೀಯೂರು ನಿವಾಸಿ ಕೆ.ಸಾಜುದ್ದೀನ್ (47) ಬಂಧಿತ ಆರೋಪಿ.
ಕಳನಾಡಿನ ಚೆಮ್ನಾಡು ವನಿತಾ ಸರ್ವೀಸ್ ಸೊಸೈಟಿಯಲ್ಲಿ ಕಳೆದ ಮಾರ್ಚ್ನಿಂದ ಮೂರು ತಿಂಗಳ ಅವಧಿಯಲ್ಲಿ ನಕಲಿ ಚಿನ್ನದ ಸರ ಹಾಗೂ ನಾಲ್ಕು ಬಳೆಗಳು ಸೇರಿದಂತೆ ಒಟ್ಟು 48.21 ಗ್ರಾಂ ತೂಕದ ಆಭರಣಗಳನ್ನು ಅಡವಿಟ್ಟು ಆರೋಪಿ ಸಾಲ ಪಡೆದಿದ್ದನು. ಬಳಿಕ ಸೊಸೈಟಿಯವರು ಆಭರಣಗಳನ್ನು ಪರಿಶೀಲಿಸಿದಾಗ ಅವು ನಕಲಿ ಚಿನ್ನವೆಂಬುದು ಪತ್ತೆಯಾಗಿದೆ ಎಂದು ದೂರಲಾಗಿದೆ.
ಈ ಕುರಿತು ಸೊಸೈಟಿಯ ಕಾರ್ಯದರ್ಶಿ ಉಷಾ ಕುಮಾರಿ ನೀಡಿದ ದೂರಿನಂತೆ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ದಾಖಲಾದ ಬಳಿಕ ಆರೋಪಿ ಕೇರಳ ಮತ್ತು ಕರ್ನಾಟಕದ ವಿವಿಧೆಡೆ ತಲೆಮರೆಸಿಕೊಂಡಿದ್ದನು.
ಇತ್ತೀಚೆಗೆ ಮತ್ತೊಂದು ಪ್ರಕರಣದಲ್ಲಿ ಬಂಧಿತನಾಗಿ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿಯನ್ನು ಪತ್ತೆ ಹಚ್ಚಿರು ಪೊಲೀಸರು, ನಕಲಿ ಚಿನ್ನದ ವಂಚನೆ ಪ್ರಕರಣದಲ್ಲಿ ಮತ್ತೆ ಬಂಧಿಸಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಯ ವಿರುದ್ಧ ಸುಳ್ಯ ಮತ್ತು ಪುತ್ತೂರು ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣಗಳಿದ್ದು, ಕೇರಳದಲ್ಲಿಯೂ ಇತರ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.