ಕಾಸರಗೋಡು: ಬದಿಯಡ್ಕ ಪೇಟೆ ಸಮೀಪದ ಬಿಎಸ್‌ಎನ್‌ಎಲ್ ಟವರ್ ಏರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಬೆದರಿಕೆ ಹಾಕಿದ ನಾಟಕೀಯ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಟವರ್ ಏರಿದ ವ್ಯಕ್ತಿಯನ್ನು ನಾರಂಪಾಡಿ ನಿವಾಸಿ ಹಾಗೂ ಈ ಹಿಂದೆ ಬದಿಯಡ್ಕದಲ್ಲಿ ಸ್ಟುಡಿಯೋ ನಡೆಸುತ್ತಿದ್ದ ಮೋಹನ್‌ದಾಸ್ ಎಂದು ಗುರುತಿಸಲಾಗಿದೆ.

ಮಂಗಳವಾರ ಬೆಳಿಗ್ಗೆ ಸುಮಾರು 8.30ರ ವೇಳೆಗೆ ಮೋಹನ್‌ದಾಸ್ ಬಿಎಸ್‌ಎನ್‌ಎಲ್ ಟವರ್ ಏರಿದ್ದು, ಇದನ್ನು ಕಂಡ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಜನರು ಸೇರುತ್ತಿದ್ದಂತೆ ಅವರು ಟವರ್‌ನ ಇನ್ನಷ್ಟು ಎತ್ತರಕ್ಕೆ ಏರಿ ಅಲ್ಲಿಂದ ಕೂಗಾಡಲು ಆರಂಭಿಸಿದರು. ಅವರು ಹೇಳುತ್ತಿದ್ದ ಬೇಡಿಕೆಗಳು ಸ್ಪಷ್ಟವಾಗಿ ಕೇಳಿಸಲಿಲ್ಲ ಎಂದು ತಿಳಿದುಬಂದಿದೆ.

ಯಾರಾದರೂ ಟವರ್ ಏರಲು ಯತ್ನಿಸಿದರೆ ತಮ್ಮ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳುವುದಾಗಿ ಮೋಹನ್‌ದಾಸ್ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಕಾಸರಗೋಡಿನಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಬದಿಯಡ್ಕ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಅಧಿಕಾರಿಗಳು ಸತತ ಮನವೊಲಿಕೆ ನಡೆಸಿದ ಬಳಿಕ ಹಲವು ಗಂಟೆಗಳ ಕಾರ್ಯಾಚರಣೆಯ ನಂತರ ಮೋಹನ್‌ದಾಸ್ ಅವರನ್ನು ಸುರಕ್ಷಿತವಾಗಿ ಟವರ್‌ನಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾದರು.

ಈ ಹಿಂದೆಯೂ ಮೋಹನ್‌ದಾಸ್ ಮರ ಹಾಗೂ ಮೊಬೈಲ್ ಟವರ್ ಏರಿ ಇದೇ ರೀತಿಯಲ್ಲಿ ಆತ್ಮಹತ್ಯೆ ಬೆದರಿಕೆ ಹಾಕಿದ್ದ ಘಟನೆಗಳು ನಡೆದಿವೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor