‘ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ’: ಸಿರಿಬಾಗಿಲು ಪ್ರತಿಷ್ಠಾನದಲ್ಲಿ ವಿಚಾರಗೋಷ್ಠಿ
ಕಾಸರಗೋಡು: ‘ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ’ ಎಂಬ ಶೀರ್ಷಿಕೆಯಡಿ ಯಕ್ಷಗಾನ ವಲಯದ ವಿದ್ವಾಂಸರು, ಸಂಘಟಕರು, ಕಲಾವಿದರು ಹಾಗೂ ಮಾಧ್ಯಮ ಪ್ರತಿನಿಧಿಗಳ ಭಾಗವಹಿಸುವಿಕೆಯಲ್ಲಿ ಪ್ರಸಕ್ತ ವಿದ್ಯಮಾನಗಳ ಕುರಿತ ವಿಚಾರಗೋಷ್ಠಿ ಸಿರಿಬಾಗಿಲು ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಯಕ್ಷಗಾನ ಕ್ಷೇತ್ರದ ಸಮಕಾಲೀನ ವಿಚಾರಗಳನ್ನು ಚರ್ಚಿಸುವ ಇಂತಹ ಕಾರ್ಯಕ್ರಮಗಳು ಸ್ತುತ್ಯರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯಕ್ಷಗಾನ ವಲಯದ ವಿದ್ವಾಂಸರಾದ ಡಾ. ಎಂ. ಪ್ರಭಾಕರ್ ಜೋಶಿ ಹಾಗೂ ಪ್ರಸಂಗಕರ್ತರಾದ ಡಾ. ರಾಘವನ್ ನಂಬಿಯಾರ್ ವಿಚಾರಗೋಷ್ಠಿಗೆ ಚಾಲನೆ ನೀಡಿದರು. ಯಕ್ಷಗಾನದ ಸಂಪ್ರದಾಯ, ನವೀನತೆ, ಯುವಪೀಳಿಗೆಯ ಆಕರ್ಷಣೆ, ಕಲಾವಿದರ ರಂಗಪ್ರಸ್ತುತಿ ಹಾಗೂ ಪ್ರೇಕ್ಷಕರ ಸ್ಪಂದನೆ ಕುರಿತಂತೆ ಶ್ರೀ ಹರಿಕೃಷ್ಣ ಹೊಳ್ಳ ಬ್ರಹ್ಮಾವರ ವಿಷಯ ಮಂಡಿಸಿದರು.
ಉದಯವಾಣಿ ಪತ್ರಿಕೆಯ ಲಕ್ಷ್ಮಿ ಮಚ್ಚಿನ ಅವರು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳ ಮೂಲಕ ಯಕ್ಷಗಾನಕ್ಕೆ ಹೊಸ ಪ್ರೇಕ್ಷಕರು ದೊರೆಯುತ್ತಿರುವ ಸಾಧ್ಯತೆಗಳ ಕುರಿತು ಪ್ರಬಂಧ ಮಂಡಿಸಿದರು.
ಯಕ್ಷಗಾನದ ಕಲಾತ್ಮಕ ಗುಣಮಟ್ಟ, ಜನಪ್ರಿಯತೆ, ಸಾಮಾಜಿಕ ಪರಿವರ್ತನೆ ಹಾಗೂ ಪ್ರದರ್ಶನಗಳ ಸ್ವರೂಪದಲ್ಲಾಗುತ್ತಿರುವ ಬದಲಾವಣೆಗಳ ಕುರಿತು ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದ ಸಂಚಾಲಕ ಹಾಗೂ ಕಲಾವಿದ ಉಜಿರೆ ಅಶೋಕ್ ಭಟ್ ವಿಚಾರ ಮಂಡಿಸಿದರು.
ಲೇಖಕ ಹಾಗೂ ಅರ್ಥದಾರಿಗಳಾದ ರಾಧಾಕೃಷ್ಣ ಕಲ್ಚಾರ್ ಅವರು ಪ್ರೇಕ್ಷಕರ ಸ್ಪಂದನೆ, ಕಲೆಯ ಗುಣಮಟ್ಟ ವೃದ್ಧಿಯಲ್ಲಿ ಅವರ ಪಾತ್ರ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವದ ಕುರಿತು ಮಾತನಾಡಿದರು.
ಕಾಸರಗೋಡು ಸರಕಾರಿ ಕಾಲೇಜಿನ ಉಪನ್ಯಾಸಕ ಡಾ. ರತ್ನಾಕರ ಮಲ್ಲಮೂಲೆ ಅವರು ಯಕ್ಷಗಾನದ ಭವಿಷ್ಯದ ಬೆಳವಣಿಗೆ, ಸಮಷ್ಟಿಪ್ರಜ್ಞೆಯ ಅಗತ್ಯ ಹಾಗೂ ಮುಂದಿನ 25 ವರ್ಷಗಳ ಮುನ್ನೋಟದ ಕುರಿತು ಬೆಳಕು ಚೆಲ್ಲಿದರು.
ಸತೀಶ ಅಡಪ್ಪ ಸಂಕಬ್ಯೆಲು, ಯೋಗೀಶ ರಾವ್ ಚಿಗುರುಪಾದೆ, ವೆಂಕಟೇಶ ನಾವಡ ಪೊಳಲಿ, ಧನಂಜಯ ನೆಲ್ಯಾಡಿ, ವಿ. ರಾಘವೇಂದ್ರ ಉಡುಪ, ನಿತ್ಯಾನಂದ ರಾವ್ ಪೇಜಾವರ, ಪದ್ಮ ಆಚಾರ್, ಮಹೇಶ ಮಣಿಯಾಣಿ, ದೇವಕಾನ ಶ್ರೀಕೃಷ್ಣ ಭಟ್, ದಿವಾಣ ದುರ್ಗಾಪ್ರಸಾದ್ ಕಟೀಲು, ದಿನೇಶ್ ಉಪ್ಪೂರ, ಸದಾಶಿವ ನಲ್ಲಿಮಾರು, ವಿಷ್ಣು ಶರ್ಮ ವಾಟೆಪಡುಪು, ರವಿ ಅಲೆವೂರಾಯ, ದೇವಾನಂದ ಭಟ್ ಬೆಳುವಾಯಿ, ಸಿತ್ಲಾ ರಂಗನಾಥ ರಾವ್, ರಾಜಾರಾಮ ರಾವ್ ಮೀಯಪದವು, ಸುಬ್ಬಪ್ಪ ಕೈಕಂಬ, ಭುಜಬಲಿ ಧರ್ಮಸ್ಥಳ, ಅಮ್ಮುಂಜೆ ಜನಾರ್ದನ ಹಾಗೂ ಶ್ಯಾಮ್ ಕುಂಚಿನಡ್ಕ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಭಿಪ್ರಾಯ ಹಂಚಿಕೊಂಡರು.
ಡಾ. ಶ್ರುತಕೀರ್ತಿರಾಜ ಉಜಿರೆ ಹಾಗೂ ಹರೀಶ ಬಳಂತಿಮುಗರು ಕಾರ್ಯಕ್ರಮ ನಿರ್ವಹಿಸಿದರು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅತಿಥಿಗಳನ್ನು ಸ್ವಾಗತಿಸಿದರು. ವಿಜ್ಞೇಶ ಕಾರಂತ ಕೂಡ್ಲು ಹಾಗೂ ಉದಯ ಕಂಬಾರು ಪ್ರಾರ್ಥನೆ ನೆರವೇರಿಸಿದರು. ಪಣಂಬೂರು ವೆಂಕಟರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷೆ ಗೋಪಿಕಾ ಸತೀಶ ಮಯ್ಯ ಉಪಸ್ಥಿತರಿದ್ದರು.
ಬಳಿಕ ಪಣಂಬೂರು ವೆಂಕಟರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ‘ಗುರುದಕ್ಷಿಣೆ–ಅಸಿಕಾ ಪರಿಣಯ’ ಯಕ್ಷಗಾನ ಪ್ರದರ್ಶನ ನಡೆಯಿತು.