ಕಾಸರಗೋಡು| ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ; ಮಹಿಳೆಯ ವಿರುದ್ಧ ಪೋಕ್ಸೊ ಪ್ರಕರಣ ದಾಖಲು
ಕಾಸರಗೋಡು: ಮನೆಯಲ್ಲಿ ಮಲಗಿದ್ದ 16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮಹಿಳೆಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಮೇಲ್ಪರಂಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಣ್ಣೂರು ಜಿಲ್ಲೆಯ ಪುಳಿಪ್ಪರಂಬ ನಿವಾಸಿ ಸ್ನೇಹ ಮೆರ್ಲಿನ್ (25) ಆರೋಪಿ ಎಂದು ಗುರುತಿಸಲಾಗಿದೆ. ಈಕೆ ಸಂತ್ರಸ್ತ ಬಾಲಕಿಯ ತಾಯಿಯ ಸ್ನೇಹಿತೆ ಎಂದು ತಿಳಿದುಬಂದಿದೆ.
ಸ್ನೇಹ ಮೆರ್ಲಿನ್ ಬಾಲಕಿಯ ಮನೆಗೆ ಭೇಟಿ ನೀಡಿದ್ದ ಸಂದರ್ಭ ಬಾಲಕಿ ಮನೆಯಲ್ಲಿ ಮಲಗಿದ್ದು, ಈ ವೇಳೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಯ ಹಾಗೂ ಮಾನಸಿಕವಾಗಿ ನೊಂದಿದ್ದ ಬಾಲಕಿ ಆರಂಭದಲ್ಲಿ ಈ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ. ಇತ್ತೀಚೆಗೆ ಶಾಲೆಯಲ್ಲಿ ನಡೆದ ಕೌನ್ಸಿಲಿಂಗ್ ವೇಳೆ ಬಾಲಕಿ ತನಗಾದ ದೌರ್ಜನ್ಯವನ್ನು ತಿಳಿಸಿದ್ದಾಳೆ.
ಚೈಲ್ಡ್‌ಲೈನ್ ಅಧಿಕಾರಿಗಳು ನೀಡಿದ ಮಾಹಿತಿ ಯಂತೆ ಮೇಲ್ಪರಂಬ ಪೊಲೀಸರು ಪೋಕ್ಸೊ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ಸ್ನೇಹ ಮೆರ್ಲಿನ್ ವಿರುದ್ಧ ಈ ಹಿಂದೆಯೂ ಎರಡು ಪೋಕ್ಸೊ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.