ಮಡಿಕೇರಿ : ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮಲಯಾಳಿ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕೊಡಗು ಹಿಂದೂ ಮಲಯಾಳಿ ಸಮಾಜದ ವತಿಯಿಂದ ಗೋಣಿಕೊಪ್ಪಲು ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಯಿತು.

ಸಮಾಜದ ಅಧ್ಯಕ್ಷ ಪ್ರಶಾಂತ್ ಮಾತನಾಡಿ, ಮಲಯಾಳಿಗಳು ಹಲವು ದಶಕಗಳಿಂದ ಕೊಡಗಿನಲ್ಲಿ ವಿವಿಧ ಸಮುದಾಯಗಳೊಂದಿಗೆ ಸೌಹಾರ್ದತೆಯಿಂದ ಬದುಕುತ್ತಿದ್ದು, ಜಿಲ್ಲೆಯ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಮುದಾಯದ ಬಗ್ಗೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಜನರ ಭಾವನೆಗಳಿಗೆ ನೋವುಂಟುಮಾಡಿವೆ. ನಿಷ್ಪಕ್ಷ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸ್ಥಾಪಕಾಧ್ಯಕ್ಷ ಹಾಗೂ ಗೌರವಾಧ್ಯಕ್ಷ ಶರತ್ ಕಾಂತ್ ಮಾತನಾಡಿ, ಇಂತಹ ಹೇಳಿಕೆಗಳು ಸಮುದಾಯಗಳ ನಡುವೆ ವೈಮನಸ್ಸು ಮೂಡಿಸುವ ಆತಂಕವಿದೆ. ಸಮಾಜದ ಗೌರವ ಮತ್ತು ಸ್ವಾಭಿಮಾನ ರಕ್ಷಣೆಗಾಗಿ ದೂರು ಸಲ್ಲಿಸಲಾಗಿದೆ ಎಂದರು.

ಈ ಸಂದರ್ಭ ಉಪಾಧ್ಯಕ್ಷ ಸಿ.ಕೆ. ವೇಣುಗೋಪಾಲ್, ಕೆಎನ್‌ಎಸ್‌ಎಸ್ ಅಧ್ಯಕ್ಷ ವಕೀಲ ಸಂಜೀವ, ವಿಶ್ವಕರ್ಮ ಸಂಘದ ಅಧ್ಯಕ್ಷ ಮಣಿಕಂಠ, ಎಸ್‌ಎನ್‌ಡಿಪಿ ಜಂಟಿ ಕಾರ್ಯದರ್ಶಿ ಸುಧೀರ್, ಕೆಎನ್‌ಎಸ್‌ಎಸ್ ಖಜಾಂಚಿ ಭಾಸ್ಕರ್, ವಿಶ್ವಕರ್ಮ ಸಂಘದ ಕಾರ್ಯದರ್ಶಿ ರಾಘವ ಹಾಗೂ ಎಸ್‌ಎನ್‌ಡಿಪಿ ಸದಸ್ಯ ಸಪ್ತಾಶ್ ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor