ಮಡಿಕೇರಿ : ಸುಂಟಿಕೊಪ್ಪ ಹೋಬಳಿ ಕೆದಕಲ್-ನೇಗದಾಳು ಗ್ರಾಮದ ತೋಟವೊಂದರಲ್ಲಿ ಕಾಡುಕೋಣದ ಕಳೇಬರ ಪತ್ತೆಯಾಗಿದೆ.

ಕಾಡುಕೋಣವನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಘಟನಾ ಸ್ಥಳಕ್ಕೆ ಕುಶಾಲನಗರ ವಲಯದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಡುಕೋಣದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.

ಸುಂಟಿಕೊಪ್ಪ ರೈತ ಸಂಘದ ಪದಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕಾಡುಕೋಣವನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಶಂಕೆ ಇದ್ದು ಪ್ರಕರಣ ಅತ್ಯಂತ ಗಂಭೀರವಾಗಿದೆ. ಅರಣ್ಯ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ರೈತ ಸಂಘದ ಅಧ್ಯಕ್ಷ ಕ್ಲೈವ್ ಪೊನ್ನಪ್ಪ, ಪ್ರಸ್ತುತ ಕಾಫಿ ಕುಯ್ಲಿಲಿನ ಸಮಯವಾಗಿದ್ದು, ಪ್ರತಿ ದಿನ ಕಾಡುಕೋಣಗಳು ತೋಟಗಳಲ್ಲಿ ಕಂಡು ಬರುತ್ತಿವೆ. ಇದರಿಂದ ತೋಟ ಕಾರ್ಮಿಕರು, ಬೆಳೆಗಾರರಲ್ಲಿ ಆತಂಕ ವಾತಾವರಣ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾಡುಕೋಣಗಳು ತೋಟಗಳಿಗೆ ಲಗ್ಗೆ ಇಡದಂತೆ ತಡೆಯಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಹೇರೂರು ವನ್ಯಜೀವಿ ಹತ್ಯೆಯನ್ನು ಸಹಿಸಲು ಸಾಧ್ಯವಿಲ್ಲ. ಅರಣ್ಯ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾಡುಕೋಣ ಹತ್ಯೆ ಮಾಡಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕುಶಾಲನಗರ ವಲಯ ಆರ್‌ ಎಫ್‍ಓ ರಕ್ಷಿತ್ ಮತ್ತು ಸಿಬ್ಬಂದಿಗಳು, ಸುಂಟಿಕೊಪ್ಪ ರೈತ ಸಂಘದ ಪ್ರಮುಖರಾದ ದಾಸಂಡ ರಮೇಶ್ ಚಂಗಪ್ಪ, ಕುಂಜಿಲನ ಮಂಜುನಾಥ್, ಮಾಗಲು ವಸಂತ, ಉದಯ, ಸಂಜು ಪೊನ್ನಪ್ಪ, ಸೋಮಯ್ಯ, ಜಗದೀಶ್, ಗೋಪಿನಾಥ್, ಪುಲ್ಲೇರ ವಸಂತ, ವೆಂಕಪ್ಪ ಮತ್ತಿತರರು ಹಾಜರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎಸ್.ಕೆ. ಲಕ್ಷ್ಮೀಶ್/ವಾರ್ತಾಭಾರತಿ

ಕೊಡಗು ಜಿಲ್ಲಾ ವರದಿಗಾರರು

ಲಕ್ಷ್ಮೀನಾರಾಯಣ ಎಸ್.ಕೆ ಅವರು ಕಳೆದ 25 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದು, ವಿವಿಧ ದೃಶ್ಯ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಪ್ರಸ್ತುತ “ವಾರ್ತಾಭಾರತಿ” ಕನ್ನಡ ದಿನಪತ್ರಿಕೆಯ ಕೊಡಗು ಜಿಲ್ಲಾ ವರದಿಗಾರರಾಗಿ ಕಳೆದ 16 ವರ್ಷಗಳಿಂದ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.