Kodagu | ವೃದ್ಧೆಯ ಕೊಲೆ : ಚಿನ್ನಾಭರಣ, ನಗದು ದೋಚಿದ ದುಷ್ಕರ್ಮಿಗಳು
ಮಡಿಕೇರಿ : ವೃದ್ಧೆಯನ್ನು ಕೊಲೆ ಮಾಡಿ ಚಿನ್ನಾಭರಣ ಮತ್ತು ನಗದು ದೋಚಿದ ಪ್ರಕರಣ ಕೊಡಗಿನ ಗಡಿಭಾಗ ಕೊಪ್ಪ ಬಳಿ ನಡೆದಿದೆ. ಕೂಡಿಗೆಯ ಪೂರ್ಣಚಂದ್ರ ಬಡಾವಣೆಯ ನಿವಾಸಿ ರತ್ನ(77) ಎಂಬುವವರೇ ಕೊಲೆಯಾದ ವೃದ್ಧೆ.
ಶನಿವಾರ ಆಟೋರಿಕ್ಷಾವೊಂದರಲ್ಲಿ ತೆರಳಿದ್ದ ರತ್ನ ಅವರು ಮನೆಗೆ ಮರಳಿ ಬಾರದ ಹಿನ್ನೆಲೆಯಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ಕೈಗೊಂಡು ತಪಾಸಣೆ ನಡೆಸಿದ ಸಂದರ್ಭ ರತ್ನ ಅವರ ಮೃತದೇಹ ಬೈಲುಕೊಪ್ಪದ ಟಿಬೆಟ್ ಕ್ಯಾಂಪ್ ನ ಸಮೀಪ ಜೋಳದ ಹೊಲದಲ್ಲಿ ಸೋಮವಾರ ಸಂಜೆ ಪತ್ತೆಯಾಗಿತ್ತು.
ರತ್ನ ಅವರು ತಮಗೆ ಪರಿಚಿತನಾದ ಆಟೋ ಚಾಲಕರೊಬ್ಬರ ಆಟೋದಲ್ಲಿ ತೆರಳಿದ್ದರು ಎಂದು ತಿಳಿದು ಬಂದಿದೆ. ಇದೀಗ ಪೊಲೀಸರು ಆಟೋ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.