ಮಡಿಕೇರಿ, ಆ.25: ಕೊಡಗು ಜಿಲ್ಲೆಯಲ್ಲಿ ವ್ಯಾಪಕವಾಗಿ ಭಾರೀ ಗಾಳಿ ಹಾಗೂ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಮರಳು ಮತ್ತು ಮರದ ದಿಮ್ಮಿಗಳ ಸಾಗಾಟ ಹಾಗೂ ಭಾರೀ ವಾಹನಗಳ ಸಂಚಾರದ ಮೇಲಿನ ನಿಷೇಧವನ್ನು ಆಗಸ್ಟ್ 31ರವರೆಗೆ ವಿಸ್ತರಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಮುಂಗಾರು ಮಳೆಯ ಪ್ರಮಾಣ ಹೆಚ್ಚಾದ ಸಂದರ್ಭದಲ್ಲಿ ನೆಲದಲ್ಲಿ ತೇವಾಂಶ ಹೆಚ್ಚಾಗಿ, ಅಧಿಕ ಭಾರದ ವಾಹನಗಳು ಸಂಚರಿಸುವುದರಿಂದ ಭೂಕುಸಿತ ಸೇರಿದಂತೆ ಅನಾಹುತಗಳು ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯ ರಸ್ತೆಗಳು, ಸಾರ್ವಜನಿಕ ಆಸ್ತಿ-ಪಾಸ್ತಿ ಹಾಗೂ ಪ್ರಯಾಣಿಕರು ಮತ್ತು ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಈ ಹಿಂದೆ ಹೊರಡಿಸಿದ್ದ ಆದೇಶದಂತೆ ಆ.17ರವರೆಗೆ ಜಿಲ್ಲೆಯಾದ್ಯಂತ ಮರಳು ಮತ್ತು ಮರದ ದಿಮ್ಮಿಗಳ ಸಾಗಾಣಿಕೆ ಹಾಗೂ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಪ್ರಸಕ್ತ ಜಿಲ್ಲೆಯಾದ್ಯಂತ ವ್ಯಾಪಕ ಭಾರೀ ಗಾಳಿ ಮತ್ತು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯನ್ನು ಆಗಸ್ಟ್ 31ರವರೆಗೆ ಮುಂದುವರಿಸಲಾಗಿದೆ.

ಉಳಿದಂತೆ ಹಿಂದಿನ ಆದೇಶದಲ್ಲಿದ್ದ ಯಾವುದೇ ನಿಯಮಗಳಲ್ಲಿ ಬದಲಾವಣೆ ಇರುವುದಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor