×
Ad

ಕುಶಾಲನಗರದಲ್ಲಿ ಹಿಂದುತ್ವ ಸಂಘಟನೆಗಳ ಪ್ರತಿಭಟನೆ; ಪರ್ಯಾಯ ಮಾರ್ಗದ ಮೂಲಕ ಕೊಡಗಿನಿಂದ ತೆರಳಿದ ಎಂ.ಕೆ.ಸ್ಟಾಲಿನ್

Update: 2026-06-01 23:24 IST

ಕುಶಾಲನಗರ : ಕೊಡಗು ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ತಂಗಿದ್ದ ತಮಿಳುನಾಡು ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ ಮತ್ತು ಅಲ್ಲಿನ ವಿರೋಧ ಪಕ್ಷ ನಾಯಕ ಉದಯ ನಿಧಿ ಸ್ಟಾಲಿನ್ ಅವರು ತಮಿಳುನಾಡಿಗೆ ಹಿಂತಿರುಗುವ ಸಂದರ್ಭ ಕುಶಾಲನಗರದಲ್ಲಿ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಮಾಡಲು ಸಿದ್ಧತೆ ನಡೆಸಿದ್ದು, ಪೊಲೀಸರು ಪರ್ಯಾಯ ಮಾರ್ಗದ ಮೂಲಕ ಪ್ರಯಾಣಿಸಲು ಅನುವು ಮಾಡಿ ಕ್ರಮ ಕೈಗೊಂಡ ಘಟನೆ ಸೋಮವಾರ ನಡೆದಿದೆ.

ಸ್ಟಾಲಿನ್ ಹಾಗೂ ಉದಯ ನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಹಿಂದುತ್ವ ಕಾರ್ಯಕರ್ತರು ಗುಡ್ಡೆ ಹೊಸೂರು ಕುಶಾಲನಗರದ ಕೆಲವು ಕಡೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಲು ಸಿದ್ಧರಾಗಿದ್ದರು. ವಿಷಯ ತಿಳಿದ ಪೊಲೀಸ್ ಅಧಿಕಾರಿಗಳು ಕುಶಾಲನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದರು.

ಈ ನಡುವೆ ಮಡಿಕೇರಿಯಿಂದ ಸಿದ್ದಾಪುರ ರಸ್ತೆ ಮೂಲಕ ಮಾಲ್ದಾರೆ ಮಾರ್ಗವಾಗಿ ಪಿರಿಯಾಪಟ್ಟಣದಿಂದ ಮೈಸೂರಿಗೆ ಪ್ರಯಾಣಿಸಲು ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಿ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿದರು.

ಪರ್ಯಾಯ ರಸ್ತೆ ಮೂಲಕ ಸ್ಟಾಲಿನ್ ಮತ್ತು ಕುಟುಂಬ ತೆರಳಿದ ಮಾಹಿತಿ ದೊರೆತ ನಂತರ ಕುಶಾಲನಗರದ ಹಿಂದುತ್ವ ಸಂಘಟನೆಗಳ ಪ್ರಮುಖರಾದ ಸಂತೋಷ್ ಅಮೃತರಾಜ್, ಪ್ರಜ್ವಲ್ ಭಾಸ್ಕರ ನಾಯಕ್, ಪ್ರವೀಣ್, ಸುಮನ್ ಗೌಡ, ಎಂ ಡಿ ಕೃಷ್ಣಪ್ಪ ಸುಮನ್, ಡಾಲು ಮತ್ತಿತರರು ಕುಶಾಲನಗರ ಗಣಪತಿ ದೇವಾಲಯ ಮುಂಭಾಗ ಸ್ಟಾಲಿನ್ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.

ಬೆಳಗಿನಿಂದಲೇ ಕುಶಾಲನಗರ ಟೌನ್ ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಅವರ ನೇತೃತ್ವದಲ್ಲಿ ಪಟ್ಟಣ ಮತ್ತು ಸುತ್ತಮುತ್ತ ಮಡಿಕೇರಿ ಕುಶಾಲನಗರ ಹೆದ್ದಾರಿ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು ಹೆಚ್ಚುವರಿಯಾಗಿ ಜಿಲ್ಲಾ ಸಶಸ್ತ್ರದಳ ಪೊಲೀಸರನ್ನು ನಿಯೋಜಿಸಲಾಗಿತ್ತು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News