×
Ad

ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಮಕ್ಕಳಲ್ಲಿ ಕನ್ನಡ ಪ್ರೇಮ ಬೆಳೆಸಿ : ಗೋಪಾಲ್

Update: 2026-06-01 23:27 IST

ಮಡಿಕೇರಿ : ಮಕ್ಕಳಲ್ಲಿ ಕನ್ನಡ ಪ್ರೇಮವನ್ನು ಕಡ್ಡಾಯವಾಗಿ ಬೆಳೆಸಿ ಎಂದು ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪ್ರಥಮ ಸಮ್ಮೇಳನ ಅಧ್ಯಕ್ಷ ಟಿ.ಎಸ್.ಗೋಪಾಲ್ ಕರೆ ನೀಡಿದ್ದಾರೆ.

ಪೊನ್ನಂಪೇಟೆ ತಾಲೂಕಿನ ಹುದಿಕೇರಿಯ ಜನತಾ ಪ್ರೌಢಶಾಲಾ ಮೈದಾನದ ಕೂರ್ಗ್ ಸ್ಟಾರ್ ಚೆಕ್ಕೇರ ಅಪ್ಪಯ್ಯ ವೇದಿಕೆಯಲ್ಲಿ ಸೋಮವಾರ ನಡೆದ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಗೆ ಸುಮಾರು 2 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ತನ್ನದೇ ಆದ ಪ್ರಾಚೀನ ಇತಿಹಾಸ ಹೊಂದಿದೆ. ದಕ್ಷಿಣ ಭಾರತದ ದ್ರಾವಿಡ ಭಾಷೆಯಲ್ಲಿ ಕನ್ನಡ ಸೊಗಸಾದ ಭಾಷೆಯಾಗಿದ್ದು, ಮಕ್ಕಳಿಗೆ ಕನ್ನಡ ಭಾಷೆಯನ್ನು ಸರಳೀಕರಿಸಿ ಕಲಿಸುವಂತಾಗಬೇಕು ಎಂದು ಸಲಹೆ ನೀಡಿದರು.

ಯಾವುದೇ ಭಾಷೆಯನ್ನು ಸರಳವಾಗಿ ಅಕ್ಷರವನ್ನು ಮಕ್ಕಳಿಗೆ ಕಲಿಸಬೇಕು. ನಾಡು ನುಡಿ ಬಗ್ಗೆ ಅಭಿಮಾನ ಇರಬೇಕು. ಕನ್ನಡ ಭಾಷೆ, ಸಾಹಿತ್ಯಕ್ಕೆ ಒತ್ತು ನೀಡಬೇಕು. ಕನ್ನಡ ಪ್ರೇಮವನ್ನು ಎಲ್ಲೆಡೆ ಬೆಳೆಸಬೇಕೆಂದು ಸಮ್ಮೇಳನಾಧ್ಯಕ್ಷರು ವಿವರಿಸಿದರು.

ಪ್ರಾದೇಶಿಕ ಭಾಷೆ ಜೊತೆಗೆ ಇತರ ಭಾಷೆಗಳನ್ನು ಕಲಿಯುವುದರಲ್ಲಿ ಯಾವುದೇ ತಪ್ಪಿಲ್ಲ. ವರ್ತಮಾನದಲ್ಲಿ ಇಂಗ್ಲೀಷ್ ವ್ಯವಹಾರಿಕವಾಗಿ ಅಂತರ್‌ರಾಷ್ಟ್ರೀಯ ಮಾನ್ಯತೆ ಗಳಿಸಿರುವ ಭಾಷೆಯಾಗಿದ್ದು, ಎಲ್ಲ ಭಾಷೆಯನ್ನು ಕಲಿಯುವಂತಾಗಬೇಕು. ಆದರೆ ಹೊರಗಿನಿಂದ ನಾಡಿಗೆ ಬಂದವರೂ ಸಹ ಕನ್ನಡ ಕಲಿಯಬೇಕು ಮತ್ತು ಕಲಿಸುವಂತಾಗಬೇಕು ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಹಲವು ಸಾಹಿತಿಗಳು, ಕವಿಗಳು ಕನ್ನಡ ಭಾಷೆ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಚೆಕ್ಕೇರ ಅಪ್ಪಯ್ಯ ಅವರು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ ಎಂದು ತಿಳಿಸಿದರು.

 ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಕನ್ನಡದ ಮನಸ್ಸುಗಳು ಒಂದಾಗಬೇಕು. ಕನ್ನಡ ಭಾಷೆ ಎಲ್ಲೆಡೆ ಪಸರಿಸಬೇಕು. ತಾಲೂಕು ಹಾಗೂ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವುದರಿಂದ ಅಲ್ಲಿನ ಕನ್ನಡ ಸಂಸ್ಕತಿ, ಸ್ಥಳೀಯ ಭಾಷೆ ಬಗ್ಗೆ ಮಾಹಿತಿ ನೀಡಲು ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪ್ಪಂಡ ಸುರೇಶ್ ನಂಜಪ್ಪ ಮಾತನಾಡಿ, ಹತ್ತನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ್ದೇನೆ. ಕನ್ನಡ ಭಾಷೆ ಕಲಿಯುವುದಿರಿಂದ ಇತರೆ ಭಾಷೆ ಕಲಿಯಲು ಸಹಕಾರಿಯಾಗಿದೆ ಎಂದರು.

ತಾಪಂ.ಇಒ ಕೆ.ಆರ್.ರಾಜೇಶ್ ಅವರು ಮಾತನಾಡಿದರು.

ಈ ಸಂದರ್ಭ ತಹಶೀಲ್ದಾರ್ ಸಂಜನಾ, ಪೊಲೀಸ್ ಉಪ ನಿರ್ದೇಶಕ ಮಹೇಶ್ ಕುಮಾರ್, ಪೊನ್ನಂಪೇಟೆ ಪ.ಪಂ ಸಿಇಒ ಗೋಪಿ, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೋಳೆರ ದಯಾಚಂಗಪ್ಪ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್, ಸಂಘಟನಾ ಕಾರ್ಯದರ್ಶಿ ಬಿ.ಎಂ.ವಾಸುರೈ, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಬಾಳೆಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರಭು ಕುಮಾರ್, ಜಿಮ್ಮಿ ಅಯ್ಯಣ್ಣ, ಚೆಕ್ಕೇರ ಸುದೀರ್, ದಿವ್ಯ ಕಾವೇರಮ್ಮ, ಪುಟ್ಟರಾಜು, ಬಾನಂಗಡ ಅನೂಪ್, ಚಂದನಾ, ನಳಿನಿ, ದಯಾ ಚಂಗಪ್ಪ ಉಪಸ್ಥಿತರಿದ್ದರು

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News