Kodagu | ಬ್ಯಾಡಗೊಟ್ಟ ಬೂತ್-21ರಲ್ಲಿ 64 ಮುಸ್ಲಿಂ ಮತದಾರರ ಹೆಸರು ಡಿಲೀಟ್ಗೆ ಯತ್ನ ; ಬಿಜೆಪಿ ಬೂತ್ ಅಧ್ಯಕ್ಷ ಸೇರಿ 5 ಮಂದಿ ವಿರುದ್ಧ ಪ್ರಕರಣ ದಾಖಲು
ಮಡಿಕೇರಿ: ಬ್ಯಾಡಗೊಟ್ಟ ಮತಗಟ್ಟೆ 21ರಲ್ಲಿ 64 ಮುಸ್ಲಿಮ್ ಮತದಾರರನ್ನು ಡಿಲೀಟ್ ಮಾಡುವಂತೆ ಸುಳ್ಳು ಮಾಹಿತಿ ನೀಡಿ, ಫಾರಂ7 ಬಳಸಿ ಬಿಎಲ್ಒಗೆ ಆಕ್ಷೇಪಣೆ ಸಲ್ಲಿಸಿದ ಆರೋಪದ ಮೇಲೆ ಬ್ಯಾಡಗೊಟ್ಟ ಗ್ರಾಮದ ಬೂತ್ ಅಧ್ಯಕ್ಷ ಸೇರಿಸಿ ಐವರ ವಿರುದ್ಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಡಗೊಟ್ಟ ಮತಗಟ್ಟೆಯ ಮತದಾರ ಸಫ್ವಾನ್ ಜಿ.ಎಂ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. BNS 2023 ಕಲಂ 190, 192, 353(1), 353(2), 61(2) ಕಾಯ್ದೆ ಅಡಿಯಲ್ಲಿ ಲೋಕೇಶ್ ಯು.ಹೆಚ್, ರಜನಿ, ನಾಗರಾಜ್, ಸವಿತಾ ಮಳಲಿ, ಬಿ.ಎನ್ ಬಸವರಾಜ್, ಬ್ಯಾಡಗೊಟ್ಟ ಇವರ ಮೇಲೆ ಪ್ರಕರಣ ದಾಖಲಾಗಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಬ್ಯಾಡಗೊಟ್ಟ ಬೂತ್ ನಲ್ಲಿ 64 ಅರ್ಹ ಮುಸ್ಲಿಂ ಮತದಾರರನ್ನು ಡಿಲೀಟ್ ಮಾಡುವಂತೆ ಫಾರಂ 7 ದುರ್ಬಳಕೆ ಮಾಡಿಕೊಂಡ ಬಗ್ಗೆ ವಾರ್ತಾಭಾರತಿ ವರದಿ ಪ್ರಕಟಿಸಿತ್ತು. ಫಾರಂ 7 ಅನ್ನು ಬಿಜೆಪಿ ಕಚೇರಿಯಿಂದಲೇ ಪ್ರಿಂಟ್ ಮಾಡಿ ಕಾರ್ಯಕರ್ತರಿಗೆ ತಲುಪಿಸಲಾಗಿತ್ತು ಎಂಬುದನ್ನು ವಾರ್ತಾಭಾರತಿ ಬಯಲು ಮಾಡಿತ್ತು.
ವಾರ್ತಾಭಾರತಿ ಡಿಜಿಟಲ್ ಮತ್ತು ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ವರದಿ ದೇಶದೆಲ್ಲೆಡೆ ಚರ್ಚೆ ಕಾರಣವಾಗಿತ್ತು. ಇದೀಗ ಐವರ ವಿರುದ್ಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ?
ದೊಡ್ಡಕುಂದ ಗ್ರಾಮದ ನಿವಾಸಿ ಸಫ್ವಾನ್ ನೀಡಿರುವ ದೂರಿನ ಪ್ರಕಾರ, "ನಾನು ದೊಡ್ಡಕುಂದ ಗ್ರಾಮದ ನಿವಾಸಿಯಾಗಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ-21 ಬ್ಯಾಡಗೊಟ್ಟ ಮತಗಟ್ಟೆಯ ಮತದಾರನಾಗಿದ್ದೇನೆ. ನಾನು ಮತ್ತು ನನ್ನ ಕುಟುಂಬದ ಒಟ್ಟು 19 ಮಂದಿ ನಮ್ಮ ತಂದೆ-ತಾಯಿ ಹುಟ್ಟಿ ಬೆಳೆದ ಬ್ಯಾಡಗೊಟ್ಟದಲ್ಲಿಯೇ ಹಲವು ವರ್ಷಗಳಿಂದ ವಾಸವಾಗಿದ್ದು ಇದೇ ಸ್ಥಳದ ಮತದಾರರಾಗಿದ್ದೇವೆ. ವಿವಿಧ ಚುನಾವಣೆಗಳಲ್ಲಿ ನಿರಂತರವಾಗಿ ಮತದಾನ ಮಾಡುತ್ತಾ ಬಂದಿದ್ದೇವೆ. ಆದರೆ ನಮ್ಮ 19 ಮಂದಿಯ ಹೆಸರನ್ನು ಅಳಿಸುವ ಉದ್ದೇಶದಿಂದ ಬ್ಯಾಡಗೊಟ್ಟದ ಬಿಜೆಪಿ ಬೂತ್ ಅಧ್ಯಕ್ಷ ಯು.ಹೆಚ್ ಲೋಕೇಶ್, ಅವರ ಪತ್ನಿ ರಜನಿ, ಬೂತ್ ಏಜೆಂಟ್ ಎ.ಸಿ ನಾಗರಾಜ್ @ ನಾಗೇಶ್, ಅವರ ಪತ್ನಿ ಸವಿತಾ ಮಳಲಿ ಮತ್ತು ಬಿ.ಎನ್ ಬಸವರಾಜ್ ಅವರು ನಮ್ಮ ವಾಸಸ್ಥಳದ ಬಗ್ಗೆ ತಿಳಿದಿದ್ದರೂ, 01.10.2026 ರಂದು ರಾತ್ರಿ 8.30ಕ್ಕೆ ವಿಚಾರಣೆಗೆ ಬಂದಿದ್ದೆವು ಎಂದು ಸುಳ್ಳು ಕಾರಣ ನೀಡಿ, ಮತಗಟ್ಟೆ ಅಧಿಕಾರಿ ನಿರ್ಮಲ ಅವರಿಗೆ ಫಾರಂ-7 ಸಲ್ಲಿಸಿದ್ದಾರೆ" ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಾವು ಗ್ರಾಮದಲ್ಲಿಯೇ ವಾಸವಿದ್ದರೂ ಗೈರು ಹಾಜರು ಅಥವಾ ಅರ್ಹರಲ್ಲ ಎಂದು ಸುಳ್ಳು ಹೇಳಿ ಹೆಸರು ಅಳಿಸಲು ಯತ್ನಿಸಿರುವುದು ಸಂವಿಧಾನಬದ್ಧ ಮತದಾನದ ಹಕ್ಕಿಗೆ ಧಕ್ಕೆ ತರುವ ಗಂಭೀರ ಕೃತ್ಯ. ಈ ಬಗ್ಗೆ ಗ್ರಾಮದಲ್ಲಿ ವಿಚಾರಿಸಿದಾಗ ನಾವು 19 ಮಂದಿ ಸೇರಿ ಬ್ಯಾಡಗೊಟ್ಟ ಮತ್ತು ದೊಡ್ಡಕುಂದದ ಒಟ್ಟು 64 ಜನರ ಹೆಸರನ್ನು ಇದೇ ರೀತಿ ಅಳಿಸಲು ಫಾರಂ-7 ಸಲ್ಲಿಸಿರುವುದು ಗೊತ್ತಾಗಿದೆ. ಇದು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕೋಮು ದ್ವೇಷ ಹರಡಿ ದ್ವೇಷ ರಾಜಕಾರಣ ಮಾಡುವ ಉದ್ದೇಶದ ಹುನ್ನಾರವಾಗಿದೆ" ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
"ಆದ್ದರಿಂದ ಮೇಲ್ಕಂಡ ವ್ಯಕ್ತಿಗಳು ಮತ್ತು ಪೂರ್ವ ಮುದ್ರಿತ ಫಾರಂ-7 ಸೃಷ್ಟಿಸಲು ಕುಮ್ಮಕ್ಕು ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಸಫ್ವಾನ್ ದೂರಿನಲ್ಲಿ ಆಗ್ರಹಿಸಿದ್ದಾರೆ.