×
Ad

ಬುದ್ಧನ ಬದುಕೇ ಲೌಕಿಕ ಜಗತ್ತಿಗೆ ಅಗತ್ಯವಾಗಿ ಬೇಕಿರುವ ಕಾವ್ಯಾ ಔಷಧ: ಕೆ.ವಿ.ಪ್ರಭಾಕರ್

"ಕಾವ್ಯ ಬಳದಿಂಗಳು" ಕಾರ್ಯಕ್ರಮ ಉದ್ಘಾಟನೆ

Update: 2026-05-01 21:18 IST

ಕೋಲಾರ: ಬುದ್ಧನ ಬದುಕೇ ಲೌಕಿಕ ಜಗತ್ತಿಗೆ ಅಗತ್ಯವಾಗಿ ಬೇಕಿರುವ ಕಾವ್ಯಾಔಷಧವಾಗಿದ್ದು, ಸಿದ್ಧಾರ್ಥ-ಬುದ್ಧನಾಗುವ ಮಾರ್ಗದಲ್ಲಿ ಪದ ಪಾಂಡಿತ್ಯ, ಶಬ್ದ ಚಮತ್ಕಾರಕ್ಕಿಂತ ಸತ್ಯ ಮತ್ತು ಸರಳತೆ ಬುದ್ಧನ ಆಯ್ಕೆಯಾಗಿತ್ತು ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಬಣ್ಣಿಸಿದರು.

ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಬುದ್ಧ ಪೂರ್ಣಿಮಾ ಅಂಗವಾಗಿ ಆಯೋಜಿಸಿದ್ದ "ಕಾವ್ಯ ಬಳದಿಂಗಳು" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬುದ್ಧ, ಕಾವ್ಯ ಮತ್ತು ಬೆಳದಿಂಗಳು—ಈ ಮೂರರ ನಡುವೆ ಒಂದು ಅವಿನಾಭಾವ ಸಂಬಂಧವಿದೆ. ಬುದ್ಧನ ಶಾಂತತೆ, ಕಾವ್ಯದ ಸೌಂದರ್ಯ ಮತ್ತು ಬೆಳದಿಂಗಳ ತಂಪು ಇವೆಲ್ಲವೂ ಸಮಾಜಕ್ಕೆ ಮತ್ತು ಮನುಷ್ಯನ ಮನಸ್ಸಿಗೆ ನೆಮ್ಮದಿಯನ್ನು ನೀಡುವ ಅಂಶಗಳು.

"ಅಪ್ಪ ದೀಪೋ ಭವ" (ನಿನ್ನ ದೀಪ ನೀನೇ ಆಗು) ಎನ್ನುವ ಮಾತು ಬುದ್ದ ಮನುಕುಲಕ್ಕೆ ಕೊಟ್ಟ ದೀವಿಗೆಯಾಗಿದೆ ಎಂದರು.

ಸಿದ್ಧಾರ್ಥನಿಂದ ಬುದ್ಧನಾದ ಆ ಮಹಾಚೇತನದ ಪಯಣವೇ ಒಂದು ಅದ್ಭುತ ಕಾವ್ಯವಾಗಿದೆ. ಅಧಿಕಾರದ ಅರಮನೆಯ ಸುಖವನ್ನು ತೊರೆದು, ಸುಳ್ಳು ಮತ್ತು ನಕಲಿತನದ ಕ್ಷಣಿಕತೆಯ ಹೊದಿಕೆಯನ್ನು ಕಿತ್ತೆಸೆದು ಸತ್ಯವನ್ನು ಅರಸಿ ಹೊರಟ ಸಿದ್ದಾರ್ಥ ಇಟ್ಟ ಆ ಹೆಜ್ಜೆಗಳು ಇಂದಿಗೂ ಮನುಕುಲಕ್ಕೆ ದಾರಿದೀಪ ಮಾತ್ರವಲ್ಲ, ಈ ಮಹಾಚೇತನದ ಪಯಣವೇ ಒಂದು ಅದ್ಭುತ ಕಾವ್ಯ ಎಂದು ಬಣ್ಣಿಸಿದರು.

ಬದುಕು ಒಡ್ಡುವ ಎಲ್ಲ ಬಗೆಯ ತಲ್ಲಣಗಳಿಗೆ ಕಾವ್ಯದಲ್ಲಿ ಮದ್ದು ಅಡಗಿದೆ. ಲಂಡನ್ ನಲ್ಲಿ "ಪೊಯಿಟ್ರಿ ಥೆರಪಿ" (ಕಾವ್ಯ ಚಿಕಿತ್ಸೆ) ಯನ್ನು ವೈದ್ಯರು ನಿರ್ದಿಷ್ಟ ರೋಗಕ್ಕೆ ಸೂಚಿಸುವ ಪದ್ಧತಿ ಇದೆ. ಆದರೆ ಬುದ್ದನ ಬದುಕಿನ ಪ್ರತಿ ಹೆಜ್ಜೆಗಳೂ ಮೌನ ಮತ್ತು ಅರಿವಿನ ಕುಲುಮೆಯಲ್ಲಿ ಕುದ್ದು ರೂಪುಗೊಂಡ ಕಾವ್ಯಗಳಾಗಿವೆ. ಬೆಳದಿಂಗಳು ಬಾಹ್ಯ ಪ್ರಪಂಚವನ್ನು ಸುಂದರಗೊಳಿಸಿದರೆ, ಬುದ್ಧನ ಚಿಂತನೆಗಳ 'ಕಾವ್ಯ'ವು ಮನುಷ್ಯನ ಅಂತರಂಗವನ್ನು ಶುದ್ಧಗೊಳಿಸುತ್ತದೆ ಎಂದು ವಿವರಿಸಿದರು.

ಬುದ್ಧ ಬರುವವರೆಗೂ ಕ್ಷತ್ರಿಯ‌ ಧರ್ಮವೆಂದರೆ ಇನ್ನೊಬ್ಬರ ವಿರುದ್ಧದ ಶಸ್ತ್ರಸಜ್ಜಿತ ಹೋರಾಟವಾಗಿತ್ತು. ಆದರೆ ಶಾಕ್ಯ ಕುಲದಲ್ಲಿ ಜನಿಸಿದ ಯುವರಾಜ ಸಿದ್ಧಾರ್ಥ ಜಗತ್ತಿಗೆ ನಿರೂಪಿಸಿದ ಕ್ಷತ್ರಿಯ ಧರ್ಮ ಬೌದ್ಧ ಧರ್ಮವಾಗಿ ಜಗತ್ತನ್ನು ಸದಾ ಬೆಳಗುತ್ತಿದೆ.

ಅಧಿಕಾರದ ರಾಜಕುಲದಲ್ಲಿ ಹುಟ್ಟಿದ ಕಾರಣಕ್ಕೆ ಕ್ರೌರ್ಯ ಮೆರೆಯಬೇಕಾಗಿಲ್ಲ. ಅಂತಃಕರಣ, ಕರುಣೆ, ಪ್ರೀತಿ, ಮಾನವೀಯತೆಗಳನ್ನೇ ಅಸ್ತ್ರವಾಗಿಸಿಕೊಂಡು ಅಂಗುಲಿಮಾಲನಂಥವರನ್ನು ಅನುಯಾಯಿಯಾಗಿ ಮಾರ್ಪಾಡಿಸಿಕೊಂಡ ಮಹಾತ್ಮ ಬುದ್ಧನ ಬದುಕು ಮತ್ತು ಆಲೋಚನೆಗಳಿಗೆ ಚುಂಬಕ ಶಕ್ತಿ ಇದೆ. ಅದನ್ನು ಆಳವಾಗಿ ಅರಿಯುವವನ ಎದೆಯಲ್ಲಿ ಕಾವ್ಯ ಗೂಡು ಕಟ್ಟುತ್ತದೆ ಎಂದರು.

 

 ಕಾವ್ಯದ ಸೆಳೆತ ಅಮ್ಮ, ಅಜ್ಜಿಯ ಲಾಲಿ ಹಾಡಿನಿಂದ ಆರಂಭಗೊಳ್ಳುತ್ತದೆ. ಬುದ್ಧನ ಸರಳ ತತ್ವಗಳನ್ನು ಅನುಸರಿಸುತ್ತಾ ಹೋದರೆ ಬದುಕು ನಿಶ್ಚಿತವಾದ ಕಾಣಿಕೆಯಾಗುತ್ತದೆ. ಇಂದಿರುವ ಅಧಿಕಾರ ನಾಳೆ ಇರದು. ಯಾವುದರ ಮೇಲೂ ಅಧಿಕಾರ ಸಾಧಿಸಬೇಡ ಎಂಬುದನ್ನು ಒಬ್ಬ ಯುವರಾಜ ಲೋಕಕ್ಕೆ ಕಾಣ್ಕೆಯಾಗಿ ನೀಡಿರುವುದರ ಹಿಂದೆ ತಾತ್ವಿಕತೆಯ ಜತೆ ದೂರದೃಷ್ಟಿಯಿದೆ. ಸಿದ್ಧಾರ್ಥ-ಬುದ್ಧನಾಗುವ ಮಾರ್ಗದಲ್ಲಿ ಪದ ಪಾಂಡಿತ್ಯ, ಶಬ್ದ ಚಮತ್ಕಾರದ ಕುಣಿಕೆಗೆ ಜೋತು ಬೀಳಲಿಲ್ಲ. ಸತ್ಯ ಮತ್ತು ಸರಳತೆ ಬುದ್ಧನ ದೃಷ್ಟಿಯಾಗಿತ್ತು ಎಂದು ವಿವರಿಸಿದರು.

ಇಡೀ ಜಗತ್ತನ್ನು ಯುದ್ಧದ ಭೀಕರತೆ ಆವರಿಸುತ್ತಿರುವ ಇವತ್ತಿನ ವಿಷಮ ಗಳಿಗೆಯಲ್ಲಿ, ಅಧಿಕಾರ ಹಿಡಿಯಲು ಏನು ಬೇಕಾದರೂ ಮಾಡುವವರು, ಸಂಚು ಹೂಡುವವರ ನಡುವೆ ನಗುವ ಹೂವಾಗುವುದು ಸಣ್ಣ ಮಾತಲ್ಲ. ಕ್ಷತ್ರಿಯನಾಗಿ ಯುದ್ಧ ಮಾಡು ಎಂದು ಕೆಣಕಿದವರನ್ನು, ಸಂಚು ಹೂಡಿದವರನ್ನು, ಅಸೂಯೆ ಪಟ್ಟವರನ್ನು , ಸುಖಾಸುಮ್ಮನೆ ಅವಮಾನಿಸಿ, ಆರೋಪ ಮಾಡಿದವರನ್ನು ತನ್ನ ನಡೆಯಿಂದ, ಆಲೋಚನೆಗಳಿಂದ ತಿದ್ದಿದ್ದು ಕೇವಲ ಇತಿಹಾಸವಲ್ಲ. ಸಣ್ಣ ಸಣ್ಣ ವಿಚಾರಗಳಿಗೂ ಕುಣಿಕೆಗೆ ಕೊರಳೊಡ್ಡುವ ಜೆನ್ ಜಿಗಳು ಕಲಿಯಲೇಬೇಕಾದ ಬುದ್ಧ ಪ್ರಭೆಯ ಮನೋಧರ್ಮಗಳಿವು ಎಂದರು.

ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ವೆಂಕಟೇಶಯ್ಯ, ವಿಶ್ವವಿದ್ಯಾಲಯದ ಕುಲಪತಿಗಳಾದ ಬಿ ಕೆ ರವಿ, ಹಿರಿಯ ಪತ್ರಕರ್ತರೂ ಲೇಖಕರೂ ಆದ ಜಿ.ಎನ್.ಮೋಹನ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News