×
Ad

Kolar | ಇಂದು (ಮೇ 1) ʼಆದಿಮ ಸಾಂಸ್ಕೃತಿಕ ಕೇಂದ್ರ ಮಕ್ಕಳ ಮೇಳ 2026ʼ ಸಮಾರೋಪ ಸಮಾರಂಭ

Update: 2026-05-01 12:50 IST

ಕೋಲಾರ: ಮತ್ತೆ ಮೊಳೆಯಲಿ ಮಾನವೀಯತೆ” ಘೋಷವಾಕ್ಯದಡಿ ನಡೆಯುತ್ತಿರುವ ಆದಿಮ ಮಕ್ಕಳ ಮೇಳ–2026ರ ಸಮಾರೋಪ ಸಮಾರಂಭ ಮೇ 1ರಂದು ಸಂಜೆ ನಡೆಯಲಿದೆ ಎಂದು ಶಿಬಿರದ ನಿರ್ದೇಶಕ ಡಿಯರ್ ರಾಜಪ್ಪ ತಿಳಿಸಿದ್ದಾರೆ.

ನಗರದ ಹೊರವಲಯದ ದೇವರಲ್ಲಿ ಬೆಟ್ಟದ ಶಿವಗಂಗೆ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಪ್ರತಿವರ್ಷ ಡಾ. ಅಂಬೇಡ್ಕರ್ ಜಯಂತಿಯಿಂದ ಬುದ್ಧ ಪೂರ್ಣಿಮೆಯವರೆಗೆ 20 ದಿನಗಳ ಮಕ್ಕಳ ಶಿಬಿರವನ್ನು ಆಯೋಜಿಸಲಾಗುತ್ತಿದೆ ಎಂದರು. ಈ ವರ್ಷವೂ ಏಪ್ರಿಲ್ 14ರಿಂದ ಆರಂಭವಾದ ಶಿಬಿರ ಇಂದು ಸಮಾರೋಪಗೊಳ್ಳಲಿದೆ.

ಈ ವರ್ಷದ ಶಿಬಿರದಲ್ಲಿ ಒಟ್ಟು 180 ಮಕ್ಕಳು ಭಾಗವಹಿಸಿದ್ದು, ಇವರಲ್ಲಿ ಶೇಕಡಾ 80ರಷ್ಟು ಮಕ್ಕಳು 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಕಳೆದ 18 ದಿನಗಳಿಂದ ಸುಮಾರು 55 ಮಂದಿ ತರಬೇತುದಾರರು, ಸಂಪನ್ಮೂಲ ವ್ಯಕ್ತಿಗಳು ಮತ್ತು ಕಲಾ ಸಹಾಯಕರು ಮಕ್ಕಳಿಗೆ ತರಬೇತಿ ನೀಡಿದ್ದಾರೆ.

ಮಕ್ಕಳಿಗೆ ಕಲೆ, ರಂಗಭೂಮಿ, ಹಾಡುಗಾರಿಕೆ, ನೃತ್ಯ, ಅಭಿನಯ, ಜೀವನ ಕೌಶಲ್ಯಗಳ ಜೊತೆಗೆ ಪ್ರೀತಿ, ಕರುಣೆ, ಮಮಕಾರ ಹಾಗೂ ವಿಶ್ವಮಾನವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಮಾರೋಪ ಸಮಾರಂಭದಲ್ಲಿ ಕೀಲು ಕುದುರೆ, ಮರಗಾಲು ಕುಣಿತ, ತಮಟೆ, ತುಡುಗು, ನಗಾರಿ, ಹೆಣ್ಣು ಮಕ್ಕಳ ವೀರಗಾಸೆ, ತಾಲಿ ನೃತ್ಯ, ಡೊಳ್ಳು ಕುಣಿತ, ಕೋಲಾಟ, ಜಡೆ ಕೋಲಾಟ, ಚಕ್ಕೆ ಕೋಲಾಟ ಸೇರಿದಂತೆ ವಿವಿಧ ಜನಪದ ಕಲಾಪ್ರಕಾರಗಳ ಪ್ರದರ್ಶನ ನಡೆಯಲಿದೆ. ಜೊತೆಗೆ ಎರಡು ನಾಟಕಗಳನ್ನೂ ಮಕ್ಕಳು ಪ್ರದರ್ಶಿಸಲಿದ್ದಾರೆ.

ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಎನ್. ಮುನಿಸ್ವಾಮಿ ಮಾತನಾಡಿ, ಮಾನವ ಸಮಾಜ ವಿನಾಶದ ಅಂಚಿಗೆ ತಲುಪಿದ್ದು, ಪರಿಸರದ ಬಗ್ಗೆ ಯಾರು ಸಹ ಚಿಂತಿಸುತ್ತಿಲ್ಲ. ಗಾಳಿ, ನೀರು, ಆಹಾರ, ಭೂಮಿ ಎಲ್ಲವೂ ವಿಷಪೂರಿತವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಜನರಲ್ಲಿ ಸಾಂಸ್ಕೃತಿಕ ಪ್ರಜ್ಞೆ ಮೂಡಿಸಿ ನೆಲ-ಜಲ-ಪರಿಸರ ರಕ್ಷಣೆ ಮಾಡುವ ಉದ್ದೇಶದಿಂದ ಆದಿಮ ಕೇಂದ್ರ ಕಾರ್ಯನಿರ್ವಹಿಸುತ್ತಿದೆ ಎಂದರು.

ಈ ವರ್ಷ ದಿವಂಗತ ರಂಗಕರ್ಮಿ ಇಸ್ಮಾಯಿಲ್ ಗೋನಾಳ್ ಸ್ಮರಣಾರ್ಥ ನೀಡಲಾಗುವ ಪ್ರಶಸ್ತಿಗೆ ಹೊಸಪೇಟೆಯ ರಂಗಕರ್ಮಿ ಹಾಗೂ ಭಾವೈಕ್ಯ ತಾವೇದಿಕೆ ಟ್ರಸ್ಟ್ ಸಂಸ್ಥಾಪಕ ಪಿಂಜಾರ ಅಬ್ದುಲ್ ಸಾಬ್ ಆಯ್ಕೆಯಾಗಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಜಿಲ್ಲಾಧಿಕಾರಿ ಎಂ.ಆರ್. ರವಿ ಸಮಾರೋಪ ಭಾಷಣ ಮಾಡಲಿದ್ದು, ಡಾ. ನೆಲ್ಲುಕುಂಟೆ ವೆಂಕಟೇಶ್, ಡಾ. ರಾಜಪ್ಪ ದಳವಾಯಿ ಹಾಗೂ ರಂಗ ಕಲಾವಿದೆ ದು. ಸರಸ್ವತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಆದಿಮ ಪ್ರಧಾನ ಕಾರ್ಯದರ್ಶಿ ಹಾಮಾ ರಾಮಚಂದ್ರ, ಉಪಾಧ್ಯಕ್ಷ ಮಾರ್ಕಂಡಪ್ಪ, ಆದಿಮ ಸಂಸ್ಥೆಯ ಸದಸ್ಯ ನೀಲಕಂಠೇಗೌಡ, ಶಿಬಿರದ ನಿರ್ದೇಶಕರಾದ ಡಿ ಆರ್ ರಾಜಪ್ಪ ಶಿಬಿರ ಸಂಯೋಜಕರಾದ ಕಾಳಿದಾಸ, ಆದಿಮ ಹರೀಶ್ ಉಪಸ್ಥಿತರಿದ್ದರು.

ಶಿಬಿರದ ಮಕ್ಕಳಿಗೆ ಹುಲಿಗತ್ತಾಟದ ಪರಿಚಯ ಮಾಡಿಕೊಡುತ್ತಿರುವ ಶಿಕ್ಷಕ ಬಿ.ವಿ.ನಂಜುಂಡಪ್ಪ. ಅವರ ಜೊತೆಯಲ್ಲಿ ಶಿಬಿರ ಸಂಯೋಜಕ ಹರೀಷಕುಮಾರ್ ಎಂ.ಜಯಮಂಗಲ.

ಶಿಬಿರದ ಮಕ್ಕಳಿಗೆ ಓರಿಗಾಮಿ ತರಬೇತಿ ನೀಡುತ್ತಿರುವ ಬೆಂಗಳೂರಿನ ಮಹೇಶ್ ಮುನಿಯಪ್ಪನವರ್‌. ಇವರು ಕೂಡ ಶಿಬಿರಾರ್ಥಿಗಳಾಗಿದ್ದಾರೆ.

ಮರಗಾಲು ತರಬೇತಿ ನೀಡುತ್ತಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೋಪಣ್ಣ.

ಅಗ್ನಿಶಾಮಕ ದಳದ ಪ್ರಾತ್ಯಕ್ಷಿಕೆ ಸಮಯದಲ್ಲಿ ಮಕ್ಕಳ ನೀರಾಟ.

ಇದಾಯತ್ ಮಾರ್ಗದರ್ಶನದಲ್ಲಿ ಶಿಬಿರಾರ್ಥಿಗಳ ಕಂಸಾಳೆ ಕಲಿಕೆ.

ಇದಾಯತ್ ಮಾರ್ಗದರ್ಶನದಲ್ಲಿ ಶಿಬಿರಾರ್ಥಿಗಳ ಡೊಳ್ಳು ಕಲಿಕೆ.

 

ತೆಂಗಿನ ಗರಿಯಿಂದ ಆಟಿಕೆಗಳನ್ನು ತಯಾರಿಸುವ ಕಲೆಯನ್ನು ಕಲಿಸಿಕೊಡುತ್ತಿರುವ ನಿಖಿಲ್ ಜಯಮಂಗಲ.

ತುಮಕೂರಿನ ರವಿಶಂಕರ್ ಅವರ ಮಾರ್ಗದರ್ಶನ‌ದಲ್ಲಿ ಖಗೋಳ ವೀಕ್ಷಣೆ ಮಾಡುತ್ತಿರುವ ಶಿಬಿರಾರ್ಥಿಗಳು.

ಶಿಬಿರದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ತುಂಬಿ, ಪವಾಡ ಬಯಲು ಕಾರ್ಯಕ್ರಮ ನಡೆಸಿ ಕೊಟ್ಟ ಎಚ್.ಆರ್.ಸ್ವಾಮಿಯವರು.

ಶಿಬಿರದ ಮಕ್ಕಳ ಸಾಮೂಹಿಕ ಭೋಜನ.

ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಕ್ಕಳ ಜೊತೆ ತಮಟೆ ನಾದಕ್ಕೆ ಹೆಜ್ಜೆ ಹಾಕಿದ ಡಾ.ಆರ್.ಕೆ.ಸರೋಜ, ಅಧ್ಯಕ್ಷರು, ಆಡಳಿತ ಮಂಡಳಿ, ಆದಿಮ ರಂಗಭೂಮಿ ಶಿಕ್ಷಣ ಕೇಂದ್ರ ಮತ್ತು ಡಾ.ಭಾಗ್ಯಲಕ್ಷ್ಮಿ, ಹೆಚ್ಚುವರಿ ಅಧಿಕಾರಿಗಳು, ಖಜಾನೆ ಇಲಾಖೆ, ಕರ್ನಾಟಕ ಸರ್ಕಾರ.

ಶಿಬಿರದ ಮಕ್ಕಳಿಗೆ ಆಟದ ಮೂಲಕ ಕಲಿಕೆಯ ಬಗೆ.

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News