ಕೋಲಾರ: ಮಹಿಳೆಯರ ವಿರುದ್ಧದ ಹಿಂಸಾಚಾರ ನಿರ್ಮೂಲನೆ ಕುರಿತ ವಿಶ್ವಸಂಸ್ಥೆಯ ದಿನದ ಅಂಗವಾಗಿ ಮತ್ತು ಅಖಿಲ ಭಾರತ ಮಹಿಳಾ ಸಮ್ಮೇಳನದ (AIWC) ಶತಮಾನೋತ್ಸವ (1927–2027) ಸಂಭ್ರಮದ ಹಿನ್ನೆಲೆಯಲ್ಲಿ ಎಐಡಬ್ಲ್ಯೂಸಿ ಸಹಯೋಗದೊಂದಿಗೆ ಕೋಲಾರದಲ್ಲಿ ಯಶಸ್ವಿನಿ ಮಹಿಳಾ ಮಂಡಳಿ (ರಿ), ಫೆವಾರ್ಡ್ -ಕೆ ಹಾಗೂ ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ವಿಶೇಷ 'ವಾಕಾಥಾನ್ - 2026 ಹಮ್ಮಿಕೊಳ್ಳಲಾಗಿತ್ತು.

ನಗರದ ಸರ್ವಜ್ಞ ಉದ್ಯಾನವನದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ನ್ಯಾಯಮೂರ್ತಿ ಪ್ರಭು ಎನ್. ಬಡಿಗಾರ್ ಮಾತನಾಡಿ, "ಎಲ್ಲಿ ನಾರಿಯರು ನೆಲಸಿರುತ್ತಾರೊ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ" ನಾಣ್ಣುಡಿಯಂತೆ ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು ಅದ್ದೂರಿಯಾಗಿ ನಡೆಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಮಹಿಳಾ ಸಬಲೀಕರಣಕ್ಕಾಗಿ ಶ್ಲಾಘನೀಯ ಸಾಧನೆಗಳನ್ನು ಮಾಡಿ ಜನರಿಗೆ ಅಪರಿಚಿತವಾಗಿರುವ ಸಂಸ್ಥೆಯ ಶತಮಾನೋತ್ಸವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಿ ಕಾರ್ಯಕ್ರಮ ಮಾಡಲು ಅವಕಾಶ ಇದ್ದರೂ ಉತ್ತಮ ರೀತಿಯಲ್ಲಿ ಸಂಘಟಿಸಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಫೆವಾರ್ಡ-ಕೆ ಜಿಲ್ಲಾಧ್ಯಕ್ಷ ಅ.ನಾ. ಹರೀಶ್ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ಜಿಲ್ಲಾದ್ಯಂತ ಸಂಸ್ಥೆಗಳ ಒಕ್ಕೂಟದ ಸದಸ್ಯ ಸಂಸ್ಥೆಗಳಿಂದ ಮಕ್ಕಳ ಮೇಲಿನ ದೌರ್ಜನ್ಯ ಮಹಿಳೆಯರ ಮೇಲಿನ ದೌರ್ಜನ್ಯ , ಮಕ್ಕಳ ಸಾಗಾಣಿಕೆ , ಪೋಕ್ಸೋ ಪ್ರಕರಣಗಳು, ಬಿಕ್ಷಾಟನೆ ವೈಯೋ ವೃದ್ಧರ ಕಾಣೆಯಾಗಿವಿಕೆ ಕುರಿತು ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಈ ಎಲ್ಲಾ ಅಂಶಗಳನ್ನು ಪತ್ತೆಹಚ್ಚಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಲಾಗುತ್ತದೆ ಮತ್ತು ಕರ್ನಾಟಕವನ್ನು ಭಿಕ್ಷಾಟನೆ ಮುಕ್ತ ರಾಜ್ಯವನ್ನಾಗಿ ಮಾಡುವ ಧ್ಯೇಯ ಹೊಂದಿದ್ದು ಕೋಲಾರ ಜಿಲ್ಲೆಯಿಂದಲೇ ಅಭಿಯಾನವನ್ನು ಮುಂದಿನ ಜನವರಿ ತಿಂಗಳಲ್ಲಿ ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಹಾಗೂ ಎ.ಐ.ಡಬ್ಲ್ಯೂ.ಸಿ ಜಿಲ್ಲಾಧ್ಯಕ್ಷೆ ಕೆ. ಶೈಲಜಾರವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲೇ ಮಾರ್ಗರೇಟ್ ಎಲಿಜಬೆತ್ ಖಾಸಿನ್ ರವರು ಸ್ಥಾಪನೆ ಮಾಡಿದ ಈ ಸಂಘಟನೆಯ ಪ್ರಥಮ ಅಧ್ಯಕ್ಷರಾಗಿ ಬರೋಡಾದ ಎರಡನೇ ಮಹಾರಾಣಿ ಚಿಮ್ನಾಬಾಯಿ ಗಾಯಕ್ವಾಡ್, ಇವರ ನಂತರದಲ್ಲಿ ಸರೋಜಿನಿ ನಾಯ್ಡು , ಕಮಲಾಬಾಯಿ ಚಟ್ಟೋಪಾಧ್ಯಾಯ ಮುಂತಾದ ಮಹಾನ್ ನಾಯಕರು ಸಂಘವನ್ನು ಮುಂದುವರಿಸಿಕೊಂಡು ಬಂದಿದ್ದಾರೆ ಎಂದ ಅವರು ಸಂಘದ ಹುಟ್ಟು ಬೆಳವಣಿಗೆ ಮತ್ತು ಶತಮಾನೋತ್ಸವ ಸಂಭ್ರಮ ಕುರಿತು ಪ್ರಸ್ತಾಪಿಸಿದರು.

ಕಾಲ್ನಡಿಗೆ ಜಾಥಾ ಸರ್ಕಾರಿ ಬಾಲಕರ ಕಾಲೇಜು ವೃತ್ತದಿಂದ ಪ್ರಾರಂಭವಾಗಿ ಚಂಪಕ್ ವೃತ್ತ, ಎಂ.ಜಿ.ರಸ್ತೆ , ಕಾಳಮ್ಮಗುಡಿ ಮೂಲಕ ಜಾಥಾ ಸಾಗಿತು. ಸಮಾಜ ಕಲ್ಯಾಣ ಇಲಾಖೆ ವೃತ್ತಿಪರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು, ಕ್ರೀಡಾ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು, ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು ವಾಕಾಥಾನ್ ನಲ್ಲಿ ಪಾಲ್ಗೊಂಡು ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲಬೇಕು, ಮಕ್ಕಳ ಸಾಗಾಣಿಕೆ ಮತ್ತು ಪೋಕ್ಸೋ ಪ್ರಕರಣಗಳು ನಿಲ್ಲಬೇಕು ಎಂದು ಘೋಷಣೆಗಳನ್ನು ಕೂಗುತ್ತ ವಾಕಾಥಾನ್ ಸರ್ವಜ್ಞ ಉದ್ಯಾನವನದಲ್ಲಿ ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಸರಬರಾಜು ಮತ್ತು ಮಾರಾಟ ಸಂಘದ ಅಧ್ಯಕ್ಷರಾದ ಘಟ್ಟಕಾಮದೇನಹಳ್ಳಿ ಶಾಂತಮ್ಮ, ಬೆಂಗಳೂರಿನ ಫೆವಾರ್ಡ್ - ಕೆ ಒಕ್ಕೂಟದ ಕೋ-ಕನ್ವೀನರ್ ಹಾಗೂ ಎಲ್.ಎಂ.ಎಸ್. ಚಾರಿಟೇಬಲ್ ಟ್ರಸ್ಟ್ ನ ಅನಿತಾ ಕೆ.ಎನ್. ಯಶಸ್ವಿನಿ ಮಹಿಳಾ ಮಂಡಳಿ ಹಾಗೂ ಎಸ್.ಸಿ.ಎಂ. ಕಾರ್ಯದರ್ಶಿ ನಾಗವೇಣಿ, ಚಿನ್ನಮ್ಮ, ಪ್ರಮೀಳಾ, ದನಮಟ್ನಹಳ್ಳಿ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor