ಎ.ವಿ.ರವಿ, ಗೌರಮ್ಮ, ಜಯಲಕ್ಷ್ಮೀ ಪಾಟೀಲ್ಗೆ ʼರಾಜ್ಯೋತ್ಸವ ಪ್ರಶಸ್ತಿʼ
ಎ.ವಿ.ರವಿ (ಜಿಮ್ ರವಿ)/ಗೌರಮ್ಮ/ಕೆ.ಜಯಲಕ್ಷ್ಮೀ ಪಾಟೀಲ್
ಬೆಂಗಳೂರು : ಅಂತಾರಾಷ್ಟ್ರೀಯ ಕ್ರೀಡಾಪಟು, ಸಮಾಜಸೇವಕ ಹಾಗೂ ನಟ ಎ.ವಿ.ರವಿ (ಜಿಮ್ ರವಿ) ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೋಲಾರ ಮೂಲದ ಜಿಮ್ ರವಿ ಅವರು ದೇಹದಾರ್ಢ್ಯ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
ಕಳೆದ 30 ವರ್ಷಗಳಿಂದ ಬೆಂಗಳೂರಿನಲ್ಲಿ ಜಿಮ್ ನಡೆಸುತ್ತಿರುವ ಅವರು, ಈವರೆಗೆ ಸುಮಾರು 1.80 ಲಕ್ಷ ಜನರಿಗೆ ತರಬೇತಿ ನೀಡಿದ್ದಾರೆ. ನಟರಾಗಿಯೂ ಗುರುತಿಸಿಕೊಂಡಿರುವ ಅವರು, ದಕ್ಷಿಣ ಭಾರತದ 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಪುರುಷೋತ್ತಮ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ.
ಕ್ರೀಡಾ ಸಾಧನೆಯ ಜೊತೆಗೆ ಸಮಾಜಸೇವೆಯಲ್ಲೂ ಜಿಮ್ ರವಿ ಅವರ ಕೊಡುಗೆ ಗಮನಾರ್ಹ. ಸುಮಾರು ನಾಲ್ಕರಿಂದ ಐದು ಸಾವಿರ ಅನಾಥ ಶವಗಳ ಅಂತ್ಯಸಂಸ್ಕಾರ ನೆರವೇರಿಸಿರುವ ಅವರು, ಯುವಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವುದರ ಜೊತೆಗೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಜಿಮ್ ರವಿ ಅವರ ಸಾಧನೆ ಹಾಗೂ ಜೀವನದ ಹಾದಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಮಂಜುನಾಥ ಮಾಗೋದಿ ಅವರು ‘ರವಿ ನೀನು ಆಗಸದಲ್ಲಿ’ ಎಂಬ ಜೀವನಚರಿತ್ರೆಯ ಪುಸ್ತಕವನ್ನು ರಚಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಕೃತಿಯ ಲೋಕಾರ್ಪಣೆಯೂ ನಡೆದಿದ್ದು, ಜಿಮ್ ರವಿ ಅವರ ಸಾಧನೆ ಮತ್ತು ಸಮಾಜಸೇವೆಯ ಪಯಣಕ್ಕೆ ಅಕ್ಷರರೂಪದ ದಾಖಲೆಯಾಗಿದೆ.
ಸೋಭಾನೆ ಕಲಾವಿಧೆ ಗೌರಮ್ಮಗೆ ʼರಾಜ್ಯೋತ್ಸವ ಪ್ರಶಸ್ತಿʼ
ಚಾಮರಾಜನಗರ ಸಮೀಪದ ಜಾಲಹಳ್ಳಿಹುಂಡಿಯ ದಿವಂಗತ ಮಾರಶೆಟ್ಟಿ ಅವರ ಪತ್ನಿ ಗೌರಮ್ಮ(81) ಜಾನಪದ ಹಾಡುಗಳ ಗಣಿ. ತಮ್ಮ ಕಂಠದಿಂದ ತಾಲ್ಲೂಕಿನ ಜಾನಪದ ಸೊಬಗನ್ನು ಎದೆಯಾಳದದಿಂದ ಹೊರಹೊಮ್ಮಿಸಿದ ಕೋಗಿಲೆ.
ಮೈಸೂರು ದಸರಾ, ಹಾವೇರಿ, ಹಂಸಬಾವಿ, ಶ್ರೀ ಮಹದೇಶ್ವರ ಬೆಟ್ಟ, ಶ್ರೀ ಬಿಳಿಗಿರಿರಂಗಸ್ವಾಮಿ ಬೆಟ್ಟ, ಚಿಕ್ಕಲೂರು ಇನ್ನು ಮುಂತಾದ ಕಡೆಗಳಲ್ಲಿ ಗೌರಮ್ಮ ಸೋಬಾನೆ ಪದಗಳನ್ನು ಹಾಡುತ್ತಾ ಬಂದಿದ್ದಾರೆ. ಇವರಿಗೆ ಅನೇಕ ಸಂಘ ಸಂಸ್ಥೆಗಳು ಗೌರವಿಸಿ, ಸನ್ಮಾನಿಸಿವೆ.
ಹಾಗೆಯೇ ತಲಕಾಡು ಪ್ರದೇಶದ ಜನಪದ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಇವರಿಗೆ 2019ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಕೆ.ಜಯಲಕ್ಷ್ಮೀ ಪಾಟೀಲ್ ಗೆ ʼರಾಜ್ಯೋತ್ಸವ ಪ್ರಶಸ್ತಿʼ
1953 ರಲ್ಲೇ ಬಾಲ ನಟಿಯಾಗಿ ರಂಗ ಪ್ರವೇಶ ಮಾಡಿದ ಕೆ.ಜಯಲಕ್ಷ್ಮೀ ಪಾಟೀಲ್ ಅವರು ಕಳೆದ 7 ದಶಕಗಳಿಂದ ರಂಗಭೂಮಿ, ಚಲನಚಿತ್ರ, ಧಾರಾವಾಹಿ ಮತ್ತು ಆಕಾಶವಾಣಿಯಲ್ಲಿ ಸಕ್ರಿಯರಾಗಿದ್ದಾರೆ. ಅವರು ರಂಗಭೂಮಿಗೆ ಅಪಾರ ಕೊಡುಗೆ ನೀಡಿದ್ದಾರೆ.
ಅವರು ಕೇವಲ ನಟಿಯಲ್ಲ, ನಾಟಕಗಳ ರಚನೆಕಾರರೂ ಹೌದು. 'ಶ್ರೀ ಓಂ ನಮೋ ಗುರು ಪುಟ್ಟರಾಜ', 'ಹಡೆದವ್ವ ಬರೆದ ಹಣೆ ಬರಹ' (ಜನಪದ ನಾಟಕ), 'ಮಿನುಗು ತಾರೆ ಕಲ್ಪನಾ' (ಏಕವ್ಯಕ್ತಿ ಪ್ರದರ್ಶನ) ಮುಂತಾದ ನಾಟಕಗಳನ್ನು ರಚಿಸಿದ್ದಾರೆ.ರಾಜ್ಯದ ಬಹುತೇಕ ಎಲ್ಲ ಪ್ರತಿಷ್ಠಿತ ನಾಟಕ ಕಂಪನಿಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ:
ಶ್ರೀ ಗಜಾನನ ನಾಟಕ ಮಂಡಳಿ (ಜಮಖಂಡಿ), ಕಲಾಪ್ರಕಾಶ ನಾಟ್ಯ ಸಂಘ (ಬ್ಯಾಡಗಿ), ಹುಚ್ಚೇಶ್ವರ ನಾಟ್ಯ ಸಂಘ (ಕಮತಗಿ), ನಂದಿಕೇಶ್ವರ ನಾಟ್ಯ ಸಂಘ (ಮಂಗಳೂರು), ಕರ್ನಾಟಕ ಕಲಾ ವೈಭವ ಸಂಘ (ಬೆಂಗಳೂರು) ಸೇರಿದಂತೆ 10ಕ್ಕೂ ಹೆಚ್ಚು ಕಂಪನಿಗಳಲ್ಲಿ ತಮ್ಮ ಅಭಿನಯದ ಛಾಪು ಮೂಡಿಸಿದ್ದಾರೆ.
ರಂಗಭೂಮಿ ಮಾತ್ರವಲ್ಲದೆ, ಗುಣ ನೋಡಿ ಹೆಣ್ಣು ಕೊಡು, ಸಿಂಹ ಘರ್ಜನೆ, ಕಣ್ಣು ತೆರೆಸಿದ ಹೆಣ್ಣು, ಕಿಲಾಡಿ ಅಳಿಯ, ಕೃಷ್ಣನ ಮ್ಯಾರೇಜ್ ಸ್ಟೋರಿ, ಪರಿಮಳ ಡಿಸೋಜಾ ಮುಂತಾದ ಚಲನಚಿತ್ರಗಳಲ್ಲೂ ಅಭಿನಯಿಸಿದ್ದಾರೆ.ಪಾಪ ಪಾಂಡು, ಬದುಕು, ಕಿನ್ನರಿ, ನಾಗಿಣಿ, ರಾಮಾಚಾರಿ, ಮಂಗಳೂರು ಹುಡುಗಿ ಹುಬ್ಬಳ್ಳಿ ಹುಡುಗ, ರೋಬೋ ಫ್ಯಾಮಿಲಿ ಮುಂತಾದ ಜನಪ್ರಿಯ ಧಾರಾವಾಹಿಗಳು ಮತ್ತು ದೂರದರ್ಶನದ ಅಂತರಾಳ, ಒಲುಮೆ ಧಾರಾವಾಹಿಗಳಲ್ಲಿ ಅವರ ಅಭಿನಯ ಮನೆಮಾತಾಗಿದೆ.