Kolar | ಎಕ್ಸ್‌ಪ್ರೆಸ್ ಹೈವೇ ಬಳಿ ಪಾರ್ಸೆಲ್ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ: ತನಿಖೆ ಚುರುಕು
ಕೋಲಾರ : ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೀಸ್ ರಸ್ತೆಯ ಬಳಿ ಪಾರ್ಸೆಲ್ ಮಾಡಿದ ರೀತಿಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಕೆಜಿಎಫ್ ತಾಲ್ಲೂಕಿನ ಸುಂದರಪಾಳ್ಯ ಗ್ರಾಮದ ಸಮೀಪ ಬೆಳಕಿಗೆ ಬಂದಿದೆ.
ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಈ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಪಾರ್ಸೆಲ್ ರೂಪದ ವಸ್ತುವೊಂದು ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು, ಅದರಿಂದ ದುರ್ವಾಸನೆ ಬರುತ್ತಿದ್ದ ಕಾರಣ ಕೂಡಲೇ ಬೇತಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಅದರಲ್ಲಿ ಮಹಿಳೆಯ ಮೃತದೇಹ ಇರುವುದು ದೃಢಪಟ್ಟಿದೆ.
ಮೃತ ಮಹಿಳೆಗೆ ಸುಮಾರು 35 ವರ್ಷ ವಯಸ್ಸಿರಬಹುದು ಎಂದು ಅಂದಾಜಿಸಲಾಗಿದೆ. ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ, ಮೃತದೇಹವನ್ನು ಕುಳಿತ ಭಂಗಿಯಲ್ಲಿ ಕೈಕಾಲು ಕಟ್ಟಿ ಗೋಣಿ ಚೀಲದಲ್ಲಿ ತುಂಬಲಾಗಿದೆ. ಅದರ ಮೇಲೆ ಪ್ಲಾಸ್ಟಿಕ್ ಕವರ್ ಸುತ್ತಿ, ಪಾರ್ಸೆಲ್ ಪ್ಲಾಸ್ಟರ್‌ನಿಂದ ಬಿಗಿಯಾಗಿ ಕಟ್ಟಲಾಗಿದೆ. ಅಲ್ಲದೆ, ಮೃತದೇಹವನ್ನು ಸಾಗಿಸಲು ಅನುಕೂಲವಾಗುವಂತೆ ಟ್ರಾಲಿಯ ಮೇಲೆ ಇರಿಸಿ ಕಟ್ಟಿ ಎಸೆದಿರುವುದು ಪೊಲೀಸರ ತನಿಖೆಯಲ್ಲಿ ಕಂಡುಬಂದಿದೆ.
ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ:
ಘಟನಾ ಸ್ಥಳಕ್ಕೆ ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ್, ಡಿವೈಎಸ್ಪಿ ಲಕ್ಷ್ಮಯ್ಯ ಸೇರಿದಂತೆ ಸೋಕೋ ತಂಡ, ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಭೇಟಿ ನೀಡಿ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮೃತರ ಗುರುತು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ಸಿಸಿಟಿವಿ ಸುಳಿವು, ವಿಶೇಷ ತಂಡ ರಚನೆ :
ದುಷ್ಕರ್ಮಿಗಳು ಕಾರಿನಲ್ಲಿ ಬಂದು ಮೃತದೇಹ ಬಿಸಾಡಿ ಹೋಗಿರುವ ದೃಶ್ಯಗಳು ಹೆದ್ದಾರಿ ಟೋಲ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿವೆ ಎನ್ನಲಾಗಿದೆ. ಸುಂದರಪಾಳ್ಯವು ಅಂತಾರಾಜ್ಯ ಗಡಿ ಭಾಗವಾಗಿರುವುದರಿಂದ ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡು ಪೊಲೀಸರಿಗೂ ಮಾಹಿತಿ ರವಾನಿಸಲಾಗಿದೆ. ಆರೋಪಿಗಳ ಶೀಘ್ರ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ನೆರವಿನೊಂದಿಗೆ ತನಿಖೆ ತೀವ್ರಗೊಳಿಸಲಾಗಿದೆ.