ಕೊಪ್ಪಳ |ಸಿಗದ ಸೂಕ್ತ ಬೆಂಬಲ ಬೆಲೆ : ರಸ್ತೆಗೆ 3 ಕ್ವಿಂಟಲ್ ಮಾವಿನಕಾಯಿ ಸುರಿದ ರೈತ
Update: 2026-06-08 20:21 IST
ಕನಕಗಿರಿ: ಮಾವಿನಕಾಯಿಗೆ ಸೂಕ್ತ ಬೆಂಬಲ ಬೆಲೆ ಸಿಗದ ಕಾರಣ ಆಕ್ರೋಶಗೊಂಡ ರೈತರೊಬ್ಬರು ಸುಮಾರು ಮೂರು ಕ್ವಿಂಟಲ್ ಮಾವಿನಕಾಯಿಯನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕಲಕೇರಿ-ವಡಕಿ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ತಾಲೂಕಿನ ರೈತ ಈಶಪ್ಪ ಅವರು ಬೆಳೆದ ಮಾವಿನಕಾಯಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದ್ದು, ಕೂಲಿ ಹಣವೂ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಬೆಂಬಲ ಬೆಲೆಗಾಗಿ ಕಾಯ್ದರೂ ಸರಕಾರದಿಂದ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ರೋಸಿ ಹೋದ ರೈತ, ಆಟೋದಲ್ಲಿ ತಂದಿದ್ದ ಮಾವಿನಕಾಯಿಯನ್ನು ರಸ್ತೆ ಬದಿ ಸುರಿದಿದ್ದಾರೆ.
ಬೆಳೆ ಬೆಳೆಯಲು ಖರ್ಚು ಮಾಡಿದ ಹಣವೂ ಬರಲ್ಲ. ಕಿತ್ತು, ಸಾಗಾಟ ಮಾಡಿದ ಕೂಲಿಯೂ ಸಿಗಲ್ಲ. ಏನು ಮಾಡೋದು ಎಂದು ಬೇಸತ್ತು ರಸ್ತೆಗೆ ಸುರಿದಿದ್ದೇನೆ ಎಂದು ರೈತ ಈಶಪ್ಪ ನೋವು ತೋಡಿಕೊಂಡಿದ್ದಾರೆ.