×
Ad

Koppal | ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ

Update: 2026-06-07 19:52 IST

ಕೊಪ್ಪಳ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್‌ ಲಿಮಿಟೆಡ್ ವತಿಯಿಂದ ಕಾರ್ಖಾನೆ ಆವರಣದಲ್ಲಿ ವಿವಿಧ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

ಕಾರ್ಯಕ್ರಮಕ್ಕೆ ಶ್ರೀವತ್ಸನ್, ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಎಂ.ಜಿ. ನಾಗರಾಜ್, ಸಿಎಚ್‌ಆರ್‌ಒ ರಿತೇಶ್ ಜೋಶಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರು ಸಸಿ ನೆಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀವತ್ಸನ್, ಪರಿಸರ ಸಂರಕ್ಷಣೆ, ಹಸಿರು ವಾತಾವರಣ ನಿರ್ಮಾಣ ಹಾಗೂ ಸುಸ್ಥಿರ ಅಭಿವೃದ್ಧಿಯ ಮಹತ್ವದ ಕುರಿತು ಸಿಬ್ಬಂದಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪರಿಸರ ಸಮತೋಲನ ಕಾಪಾಡಲು ಹೆಚ್ಚಿನ ಸಂಖ್ಯೆಯಲ್ಲಿ ಮರಗಳನ್ನು ಬೆಳೆಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುರುಳೀಧರ್ ಭಾಗವಹಿಸಿ, ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ ಹಾಗೂ ಹವಾಮಾನ ಬದಲಾವಣೆಯ ಸವಾಲುಗಳ ಕುರಿತು ಮಾಹಿತಿ ನೀಡಿದರು. ಕೈಗಾರಿಕೆಗಳು ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಶ್ರೀ ಎಂ.ಜಿ. ನಾಗರಾಜ್, ಹೆಚ್‌ಆರ್ ವಿಭಾಗದ ಉಪಾಧ್ಯಕ್ಷ ಶ್ರೀ ಶಿವಯ್ಯ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪರಿಸರ ದಿನಾಚರಣೆಯ ಅಂಗವಾಗಿ ಸಿಬ್ಬಂದಿ ಹಾಗೂ ಕಾರ್ಮಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಚಿತ್ರಕಲೆ, ಪ್ರಬಂಧ, ಘೋಷಣೆ ಮತ್ತು ಪೋಟೋಗ್ರಾಫಿ ಸ್ಪರ್ಧೆಯ ವಿಜೇತರಾದವರಿಗೆ ವೇದಿಕೆಯಲ್ಲಿ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಗೌರವಿಸಲಾಯಿತು.

ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೊಪ್ಪಳ ತಾಲ್ಲೂಕಿನ ಅತ್ಯಧಿಕ ಅಂಕ ಗಳಿಸಿದ ಎಂಟು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಿ ಸನ್ಮಾನಿಸಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯು ಪ್ರೋತ್ಸಾಹ ನೀಡಿತು.

ಕಾರ್ಯಕ್ರಮದಲ್ಲಿ ಕಾರ್ಮಿಕರು ಮುಖಂಡರು, ಕಾರ್ಮಿಕರು, ಗುತ್ತಿಗೆದಾರರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪರಿಸರ ಸಂರಕ್ಷಣೆಯ ಪ್ರತಿಜ್ಞೆಯನ್ನು ಸ್ವೀಕರಿಸಿದರು.

ಹಸಿರು ಪರಿಸರ ನಿರ್ಮಾಣ, ಮಾಲಿನ್ಯ ನಿಯಂತ್ರಣ ಮತ್ತು ಪ್ರಕೃತಿ ಸಂಪನ್ಮೂಲಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂಬ ಸಂದೇಶದೊಂದಿಗೆ ವಿಶ್ವ ಪರಿಸರ ದಿನಾಚರಣೆ-೨೦೨೬ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News