ಕೊಪ್ಪಳ: ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌)-2026ರ ಪ್ರಕ್ರಿಯೆ ಜಿಲ್ಲೆಯಲ್ಲಿ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ 5,27,459 ಪುರುಷರು, 5,31,641 ಮಹಿಳೆಯರು ಹಾಗೂ 64 ತೃತೀಯ ಲಿಂಗಿಗಳು ಸೇರಿ ಒಟ್ಟು 10,59,164 ಮತದಾರರಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ತಿಳಿಸಿದರು.

ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಜೂನ್‌ನಿಂದ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಿತ್ತು. ಇದೀಗ ಅ.27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದರು.

ಎಸ್‌ಐಆರ್ ಬಳಿಕ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರ ವಿವರಗಳನ್ನು ನೀಡಿದ ಅವರು, 60-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 1,09,826 ಪುರುಷರು, 1,07,076 ಮಹಿಳೆಯರು ಹಾಗೂ 9 ಇತರರು ಸೇರಿ ಒಟ್ಟು 2,16,911 ಮತದಾರರಿದ್ದಾರೆ. 61-ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 1,04,457 ಪುರುಷರು, 1,07,451 ಮಹಿಳೆಯರು ಹಾಗೂ 13 ಇತರರು ಸೇರಿ ಒಟ್ಟು 2,11,921 ಮತದಾರರಿದ್ದಾರೆ. 62-ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 93,506 ಪುರುಷರು, 95,638 ಮಹಿಳೆಯರು ಹಾಗೂ 15 ಇತರರು ಸೇರಿ ಒಟ್ಟು 1,89,159 ಮತದಾರರಿದ್ದಾರೆ. 63-ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 1,05,360 ಪುರುಷರು, 1,04,939 ಮಹಿಳೆಯರು ಹಾಗೂ 11 ಇತರರು ಸೇರಿ ಒಟ್ಟು 2,10,310 ಮತದಾರರಿದ್ದಾರೆ. 64-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 1,14,310 ಪುರುಷರು, 1,16,537 ಮಹಿಳೆಯರು ಹಾಗೂ 16 ಇತರರು ಸೇರಿ ಒಟ್ಟು 2,30,863 ಮತದಾರರಿದ್ದಾರೆ ಎಂದು ತಿಳಿಸಿದರು.

ಅಂತಿಮ ಮತದಾರರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ 11,808 ಪುರುಷರು, 9,702 ಮಹಿಳೆಯರು ಹಾಗೂ ಒಬ್ಬ ತೃತೀಯ ಲಿಂಗಿ ಸೇರಿ ಒಟ್ಟು 21,511 ಯುವ ಮತದಾರರಿದ್ದಾರೆ. 8,897 ಪುರುಷರು, 6,357 ಮಹಿಳೆಯರು ಹಾಗೂ ಒಬ್ಬ ತೃತೀಯ ಲಿಂಗಿ ಸೇರಿ ಒಟ್ಟು 15,255 ವಿಕಲಚೇತನ ಮತದಾರರಿದ್ದಾರೆ. 85 ವರ್ಷ ಮೇಲ್ಪಟ್ಟ 2,326 ಪುರುಷರು ಹಾಗೂ 5,247 ಮಹಿಳೆಯರು ಸೇರಿ ಒಟ್ಟು 6,053 ಹಿರಿಯ ನಾಗರಿಕ ಮತದಾರರಿದ್ದಾರೆ. ಅಲ್ಲದೆ, 494 ಪುರುಷರು ಹಾಗೂ 27 ಮಹಿಳೆಯರು ಸೇರಿ ಒಟ್ಟು 521 ಸೇವಾ ಮತದಾರರಿದ್ದಾರೆ. ಈ ಪ್ರಕ್ರಿಯೆಯಲ್ಲಿ ಒಟ್ಟು 3,327 ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದ ಅರ್ಹ ವ್ಯಕ್ತಿಗಳು ನಮೂನೆ-6ರ ಮೂಲಕ ಅರ್ಜಿ ಸಲ್ಲಿಸಬಹುದು. ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ನಮೂನೆ-7ರ ಮೂಲಕ ಹಾಗೂ ಪಟ್ಟಿಯಲ್ಲಿನ ವಿವರಗಳು ಅಥವಾ ನಮೂದುಗಳಲ್ಲಿ ತಿದ್ದುಪಡಿ ಮಾಡಿಸಲು ನಮೂನೆ-8ರ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ಹೊಸ ಮತದಾರರಾಗಿ ನೋಂದಾಯಿಸಲು ನಮೂನೆ-6, ಸಾಗರೋತ್ತರ ಮತದಾರರಾಗಿ ನೋಂದಾಯಿಸಲು ನಮೂನೆ-6ಎ ಹಾಗೂ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ನಮೂನೆ-7 ಬಳಸಬೇಕು. ನಿವಾಸದ ಸ್ಥಳ ಬದಲಾವಣೆ, ನಮೂದುಗಳ ತಿದ್ದುಪಡಿ, ಮತದಾರರ ಗುರುತಿನ ಚೀಟಿ (ಎಪಿಕ್) ಬದಲಾವಣೆ ಹಾಗೂ ವಿಕಲಚೇತನರ (ಪಿಡಬ್ಲ್ಯೂಡಿ) ಗುರುತು ದಾಖಲಿಸಲು ನಮೂನೆ-8ರ ಮೂಲಕ ಅರ್ಜಿ ಸಲ್ಲಿಸಬಹುದು ಎಂದರು.

ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಇಸಿಐ ನೆಟ್‌ (ECINet) ಆ್ಯಪ್ ಮೂಲಕ ಲಾಗಿನ್ ಮಾಡಬಹುದು ಅಥವಾ https://voters.eci.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಅಪರ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಚುನಾವಣಾ ಶಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor