ರಾಷ್ಟ್ರಮಟ್ಟಕ್ಕೆ ಕೊಪ್ಪಳದ ಸರಕಾರಿ ಶಾಲಾ ಬಾಲಕಿಯರ ವಾಲಿಬಾಲ್ ತಂಡ ಆಯ್ಕೆ
ಕೊಪ್ಪಳ: ನಗರದ ಬನ್ನಿಕಟ್ಟೆಯ ಸರ್ಕಾರಿ ಪ್ರೌಢಶಾಲೆಯ ಬಾಲಕಿಯರ ವಾಲಿಬಾಲ್ ತಂಡವು ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಬೆಳಗಾವಿ ತಂಡದ ವಿರುದ್ಧ ಗೆಲುವು ಸಾಧಿಸುವ ಮೂಲಕ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದೆ.
ಸರ್ಕಾರಿ ಪ್ರೌಢಶಾಲಾ ವಿಭಾಗದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೊಪ್ಪಳ ತಂಡದ ಆಟಗಾರ್ತಿಯರು ಅತ್ಯುತ್ತಮ ಪ್ರದರ್ಶನ ನೀಡಿದರು. ಮೊದಲ ಸುತ್ತಿನಲ್ಲಿ ಕೊಪ್ಪಳ ತಂಡ 25-15 ಅಂಕಗಳಿಂದ ಮುನ್ನಡೆ ಸಾಧಿಸಿತು. ಎರಡನೇ ಸುತ್ತಿನಲ್ಲಿ ಮತ್ತಷ್ಟು ಪ್ರಾಬಲ್ಯ ಮೆರೆದ ತಂಡ 25-5 ಅಂಕಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಅರ್ಹತೆ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ದೈಹಿಕ ಶಿಕ್ಷಕ ಶಿವಾನಂದ ಗಾಡದಿನ್ನಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿಯರು ಈ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿನಿಯರ ಸಾಧನೆಗೆ ಶಾಲೆಯ ಶಿಕ್ಷಕ ವೃಂದ ಹಾಗೂ ಡಿಡಿಪಿಐ ಹರ್ಷ ವ್ಯಕ್ತಪಡಿಸಿದ್ದು, ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ.
ತಂಡದ ಆಟಗಾರ್ತಿಯರಾದ ಕಾವೇರಿ, ಯಲ್ಲಮ್ಮ, ಶಾರದಾ, ಸ್ಪೂರ್ತಿ, ದುರ್ಗಮ್ಮ, ಅನಿತಾ ಹಾಗೂ ಅಕ್ಷತಾ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.