Kanakagiri | 600ಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆಯಲ್ಲಿ ಬಸವರಾಜರೆಡ್ಡಿ ಅಂತಿಮ ಯಾತ್ರೆ
ಕನಕಗಿರಿ: ನಿವೇಶನ ಒತ್ತುವರಿ ದೌರ್ಜನ್ಯಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ಬಸವರಾಜರೆಡ್ಡಿ ಮಾದಿನಾಳ ಅವರ ಅಂತಿಮ ಯಾತ್ರೆ ಸೋಮವಾರ 600ಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆಯಲ್ಲಿ ನಡೆಯಿತು.
ಪಟ್ಟಣದ 5ನೇ ವಾರ್ಡ್‌ನಿಂದ ಸ್ಮಶಾನದವರೆಗೆ ನಡೆದ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಅಂತಿಮ ಯಾತ್ರೆಯಲ್ಲಿ ಭಾಗವಹಿಸುವ ಸಾರ್ವಜನಿಕರು ಹಾಗೂ ಮೃತದೇಹ ಸಾಗಿಸುವವರಿಗೆ ಪ್ರತ್ಯೇಕ ಮಾರ್ಗ ವ್ಯವಸ್ಥೆ ಮಾಡಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಮೃತರ ಕುಟುಂಬಸ್ಥರು ಹಾಗೂ ಬಿಜೆಪಿ ಮುಖಂಡರು ‘ಆರೋಪಿಗಳನ್ನು ಬಂಧಿಸಿ, ನ್ಯಾಯ ಒದಗಿಸಬೇಕು’ ಎಂದು ಘೋಷಣೆಗಳನ್ನು ಕೂಗುತ್ತ ಅಂತಿಮ ಯಾತ್ರೆಯಲ್ಲಿ ಸಾಗಿದರು. ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಯಿತು.