Kuknoor | ಮಸಬಹಂಚಿನಾಳದ 48 ನಿವೇಶನ ರಹಿತ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

Update: 2026-08-15 22:42 IST

ಕುಕನೂರು: ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಸಬಹಂಚಿನಾಳ ಗ್ರಾಮದ ನಿವೇಶನ ರಹಿತ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮಸಭೆಯಲ್ಲಿ ಆಯ್ಕೆಯಾದ 48 ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರಗಳನ್ನು ವಿತರಿಸಲಾಯಿತು.

80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು.

ನಂತರ ಮಾತನಾಡಿದ ಸಚಿವರು, ಗ್ರಾಮೀಣ ಭಾಗದ ಬಡ ಹಾಗೂ ವಸತಿರಹಿತ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ಒದಗಿಸಿ ಸ್ವಂತ ಸೂರು ಕಲ್ಪಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಯಲಬುರ್ಗಾ ಕ್ಷೇತ್ರದಲ್ಲಿ ಮೂಲಸೌಕರ್ಯ, ಶಿಕ್ಷಣ ಹಾಗೂ ಸಾರ್ವಜನಿಕ ಕಲ್ಯಾಣ ಯೋಜನೆಗಳಿಗೆ ನಿರಂತರವಾಗಿ ಆದ್ಯತೆ ನೀಡಲಾಗುತ್ತಿದೆ ಎಂದರು.

ಗ್ರಾಮಸಭೆಯಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಹಕ್ಕುಪತ್ರ ವಿತರಿಸಿರುವುದರಿಂದ ನಿವೇಶನದ ಮೇಲಿನ ಮಾಲೀಕತ್ವ ಅಧಿಕೃತವಾಗಲಿದೆ. ಹಕ್ಕುಪತ್ರದ ಆಧಾರದ ಮೇಲೆ ಬ್ಯಾಂಕ್‌ಗಳಿಂದ ಮನೆ ನಿರ್ಮಾಣಕ್ಕೆ ಸಾಲ ಪಡೆಯುವುದರ ಜೊತೆಗೆ ಬಸವ ವಸತಿ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ (PMAY), ಅಂಬೇಡ್ಕರ್ ನಿವಾಸ್ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿದ್ದು, ಸ್ವಂತ ಸೂರು ಹೊಂದುವ ಅವರ ಕನಸು ನನಸಾಗುವ ನಿಟ್ಟಿನಲ್ಲಿ ಹಕ್ಕುಪತ್ರ ವಿತರಣೆ ಮಹತ್ವದ ಹೆಜ್ಜೆಯಾಗಿದೆ.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಸವರಾಜ ಬೆಣ್ಣೆ ಶಿರೂರ, ತಾ. ಪಂ.ಇ ಓ ಬೆಟದಪ್ಪ ಮಾಳೆಕೊಪ್ಪ, ಮಸಬಹಂಚಿನಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೈಜನಾಥ ಸಾರಂಗಮಠ, ತಾಲೂಕು ಪಂಚಾಯಿತಿ ವಸತಿ ಯೋಜನೆ ಕೇಸ್ ವರ್ಕರ್ ಬಸಲಿಂಗಪ್ಪ ಹಂಚಿನಾಳ, ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು, ಹಕ್ಕುಪತ್ರ ಪಡೆದ 48 ಫಲಾನುಭವಿಗಳು ಹಾಗೂ ಮಸಬಹಂಚಿನಾಳ ಗ್ರಾಮದ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News