×
Ad

ಕಾರಟಗಿ | ಉಳೇನೂರು ಗ್ರಾಮವನ್ನು ವ್ಯಸನಮುಕ್ತಗೊಳಿಸಲು ಗ್ರಾಮಸ್ಥರ ಸಂಕಲ್ಪ

ಮದ್ಯ, ಜೂಜಾಟ ನಿಷೇಧಿಸಲು ಗ್ರಾಮಸಭೆಯಲ್ಲಿ ನಿರ್ಣಯ

Update: 2026-01-22 18:03 IST

ಕಾರಟಗಿ: ಮದ್ಯಪಾನ ಹಾಗೂ ಜೂಜಾಟದಂತಹ ದುಶ್ಚಟಗಳಿಂದ ಸಮಾಜದ ನೆಮ್ಮದಿ ಹಾಳಾಗುತ್ತಿದೆ. ಹೀಗಾಗಿ ಉಳೇನೂರು ಗ್ರಾಮವನ್ನು ಸಂಪೂರ್ಣ ವ್ಯಸನಮುಕ್ತ ಗ್ರಾಮವನ್ನಾಗಿ ಮಾಡಲಾಗುವುದು ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ನಿರ್ಣಯ ಕೈಗೊಂಡಿದ್ದಾರೆ.

ತಾಲೂಕಿನ ಉಳೇನೂರು ಗ್ರಾಮದ ದ್ಯಾವಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಬೂದಗುಂಪಾದ ಸಿದ್ದೇಶ್ವರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಬಕಾರಿ, ಪೊಲೀಸ್ ಹಾಗೂ ಕಂದಾಯ ಇಲಾಖೆಯ ವಿಶೇಷ ಗ್ರಾಮಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಯಿತು.

ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಭೀಮಣ್ಣ ಅವರು, ಉಳೇನೂರು ಗ್ರಾಮವು ಕಲೆ ಮತ್ತು ಕ್ರೀಡೆಯಲ್ಲಿ ಮುಂಚೂಣಿಯಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ಮದ್ಯಪಾನ, ಓಸಿ, ಇಸ್ಪೀಟ್‌ನಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ. ಈ ಹಿನ್ನೆಲೆಯಲ್ಲಿ ಗ್ರಾಮವನ್ನು ವ್ಯಸನಮುಕ್ತಗೊಳಿಸಲು ಕೈಗೊಂಡಿರುವ ಈ ನಿರ್ಧಾರ ಶ್ಲಾಘನೀಯ ಎಂದರು.

ಅಬಕಾರಿ ನಿರೀಕ್ಷಕ ವಿಠಲ್ ಮಾತನಾಡಿ, ಇಲಾಖೆ ಮಾಡಬೇಕಾದ ಕೆಲಸವನ್ನು ಇಂದು ಊರಿನ ಯುವಕರೇ ಮಾಡುತ್ತಿರುವುದು ಸಂತಸದ ವಿಚಾರ. ಈಗಾಗಲೇ ಗಂಗಾವತಿ ವ್ಯಾಪ್ತಿಯ ಎಂಟು ಹಳ್ಳಿಗಳು ಮದ್ಯ ಮುಕ್ತ ಗ್ರಾಮಗಳಾಗಿ ಸ್ವಯಂ ಘೋಷಿಸಿಕೊಂಡಿವೆ. ಈಗ ಉಳೇನೂರು ಕೂಡ ಆ ಹಾದಿಯಲ್ಲಿದೆ. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಕಂಡುಬಂದರೆ ಕೂಡಲೇ ಇಲಾಖೆಗೆ ಮಾಹಿತಿ ನೀಡಿ, ನಾವು ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಭರವಸೆ ನೀಡಿದರು.

ಗ್ರಾಮದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಸಾರಾಯಿ ಮಾರಾಟ, ಇಸ್ಪೀಟ್ ಹಾಗೂ ಜೂಜಾಟಗಳನ್ನು ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿ ಕಾರಟಗಿ ತಹಶೀಲ್ದಾರರು, ಅಬಕಾರಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು, ಊರಿನ ಮಹಿಳೆಯರು ಹಾಗೂ ಮುಖಂಡರು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News