ಕೊಪ್ಪಳ | ವಿದೇಶಿ ಮಹಿಳೆಯ ಅತ್ಯಾಚಾರ, ಪ್ರವಾಸಿಗನ ಕೊಲೆ ಪ್ರಕರಣವನ್ನು 'ಸಣ್ಣ ಘಟನೆ' ಎಂದ ಸಂಸದ ಹಿಟ್ನಾಳ್ !
ಸಂಸದ ಕೆ.ರಾಜಶೇಖರ್ ಹಿಟ್ನಾಳ್
ಕೊಪ್ಪಳ : ಕಳೆದ ವರ್ಷ ಸಣಾಪುರ ಕಾಲುವೆ ದಂಡೆಯ ಬಳಿ ನಡೆದ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲಿನ ಅತ್ಯಾಚಾರ ಮತ್ತು ಪ್ರವಾಸಿಗನ ಕೊಲೆ ಪ್ರಕರಣ ಒಂದು ಸಣ್ಣ ಘಟನೆಯಾಗಿತ್ತು. ಅದನ್ನು ಮಾಧ್ಯಮಗಳು ದೊಡ್ಡದಾಗಿ ಬಿಂಬಿಸಿದ್ದರಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಡೆತ ಬಿತ್ತು ಎಂದು ಕೊಪ್ಪಳ ಸಂಸದ ಕೆ.ರಾಜಶೇಖರ್ ಹಿಟ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಿಲ್ಲಾಡಳಿತ ಭವನದ ಆವರಣದಲ್ಲಿ ಕೇಂದ್ರ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ “ಕೊಪ್ಪಳವನ್ನು ಅನ್ವೇಷಿಸಿ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ.
ಹಿಂದೆ ಈ ಭಾಗದಲ್ಲಿ ಒಂದು ಅತ್ಯಾಚಾರ ನಡೆದಿತ್ತು. ಮಾಧ್ಯಮಗಳು ಈ ಒಂದು ಸಣ್ಣ ಘಟನೆಯನ್ನು ದೊಡ್ಡದಾಗಿ ಪ್ರಸಾರ ಮಾಡಿದವು. ಇದರಿಂದ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಐವರು ಪ್ರವಾಸಿಗರ ತಂಡ ಸಣಾಪುರ ಕೆರೆ ಬಳಿ ತೆರಳಿದ್ದಾಗ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಅಮೇರಿಕಾದ ಡೇನಿಯಲ್ ಸೇರಿದಂತೆ ಮೂವರು ಪ್ರವಾಸಿಗರನ್ನು ತುಂಗಭದ್ರಾ ಎಡದಂಡೆ ಕಾಲುವೆಗೆ ತಳ್ಳಲಾಗಿತ್ತು. ಈ ವೇಳೆ ಒಡಿಶಾ ಮೂಲದ ಬಿಬಾಶ್ ಎಂಬುವವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಇದೇ ವೇಳೆ ಇಸ್ರೇಲ್ ಮೂಲದ ಮಹಿಳೆ ಮತ್ತು ಸ್ಥಳೀಯ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಲಾಗಿತ್ತು.